ಕರ್ನಾಟಕ

karnataka

ETV Bharat / state

ಮುಸುಕಿನ ಜೋಳ ಬೆಳೆದ ರೈತರಿಗೆ 5 ಸಾವಿರ ಆರ್ಥಿಕ ನೆರವು: ಜಿಲ್ಲಾಧಿಕಾರಿ ಬೀಳಗಿ - Davangere District Collector Meeting

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ ಮುಸುಕಿನ ಜೋಳ ಬೆಳೆದ ರೈತರಿಗೆ ಐದು ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.

Meeting
Meeting

By

Published : Jun 9, 2020, 4:57 PM IST

ದಾವಣಗೆರೆ:ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ರೈತರಿಗೆ ರೂಪಾಯಿ 5 ಸಾವಿರ ಆರ್ಥಿಕ ನೆರವನ್ನು ನೇರ ವರ್ಗಾವಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃಷಿ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ಮುಸುಕಿನ ಜೋಳ ಬೆಳೆ ಬೇಡಿಕೆ ಕಳೆದುಕೊಂಡಿತ್ತು. ಇದರಿಂದಾಗಿ ಜೋಳ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಮುಸುಕಿನ ಜೋಳ ಬೆಳೆಗಾರರಿಗೆ ಆರ್ಥಿಕ ನೆರವು ನೀಡುವುದು ಅವಶ್ಯಕವಾಗಿದೆ ಎಂದರು.

ಈ ಯೋಜನೆಯ ಕುರಿತು ಜಿಲ್ಲಾ ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು. ಯೋಜನೆ ಅನುಷ್ಠಾನದಲ್ಲಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ನಿಗದಿತ ಸಮಯದೊಳಗೆ ಹಾಗೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಸಂಬಂಧಪಟ್ಟ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಹೋಬಳಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡವನ್ನು ರಚಿಸುವ ಮೂಲಕ ಕ್ಷೇತ್ರ ತಪಾಸಣೆ ತ್ವರಿತವಾಗಿ ಕೈಗೊಳ್ಳುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಸಮೀಕ್ಷೆಯ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇರೆಗೆ ಪಾವತಿಸಬೇಕು. ಜೊತೆಗೆ ಬೆಳೆ ಸಮೀಕ್ಷೆಯಲ್ಲಿ ಇರುವಂತೆ ಮುಸುಕಿನ ಜೋಳ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಕಚೇರಿಯ ನಾಮಫಲಕದಲ್ಲಿ ಪ್ರದರ್ಶಿಸಬೇಕು. ಪಟ್ಟಿಯಲ್ಲಿ ದಾಖಲಾಗದೇ ಇರುವ ಮುಸುಕಿನ ಜೋಳ ಬೆಳೆಗಾರರಿದ್ದಲ್ಲಿ ಅಂತಹ ರೈತರಿಂದ ಅರ್ಜಿ ಪಡೆಯಬೇಕು ಎಂದು ಯೋಜನೆ ಕುರಿತು ಡಿಸಿ ವಿವರಿಸಿದರು.

ಬೆಳೆ ಸಮೀಕ್ಷೆಯಲ್ಲಿ ದಾಖಲಾಗದಿದ್ದ ರೈತರಿಂದ ಅರ್ಜಿ ಪಡೆದು ಹೋಬಳಿ ಮಟ್ಟದಲ್ಲಿ ಕೃಷಿ ಅಧಿಕಾರಿ, ಸಹಾಯಕ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರನ್ನು ಒಳಗೊಂಡ ತಂಡವನ್ನು ರಚಿಸಿ ಕೃಷಿ ಬೆಳೆಗಳ ತಾಲೂಕುಗಳನ್ನು ಪರಿಶೀಲಿಸಿ, ಸ್ಥಳೀಯವಾಗಿ ಪಂಚನಾಮೆ ಮಾಡಿಕೊಂಡು ಪರಿಹಾರ ವಿತರಿಸಲು ತಾಲೂಕು ಮಟ್ಟದ ಸಮಿತಿಗೆ ಶಿಫಾರಸು ಮಾಡಬೇಕೆಂದು ಸೂಚಿಸಿದರು.

ABOUT THE AUTHOR

...view details