ದಾವಣಗೆರೆ:ಜಿಲ್ಲೆಯ ಚನ್ನಗಿರಿಯಿಂದ ಉದ್ಯೋಗ ಅರಸಿ ದಕ್ಷಿಣ ಆಫ್ರಿಕಾದ ಸೂಡಾನ್ ದೇಶಕ್ಕೆ ತೆರಳಿದ 39 ಜನರ ಮಾಹಿತಿ ಲಭಿಸಿದೆ. ಸಂಕಷ್ಟಕ್ಕೆ ಸಿಲುಕಿದವರ ಸ್ವಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇವರೆಲ್ಲರೂ ಸೂಡಾನ್ ಅಲ್ಪಷಿರ್ ನಗರದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ. ತೊಂದರೆಗೊಳಗಾದ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸಾಂತ್ವನ ಹೇಳಿದರು.
ಸೂಡಾನ್ ದೇಶದಲ್ಲಿ ಸೇನಾಪಡೆ ಮತ್ತು ಅರೆ ಸೇನಾಪಡೆಗಳ ನಡುವೆ ಘರ್ಷಣೆ ನಡೆಯುತ್ತಿದೆ. ರಾಜಧಾನಿ ಖಾರ್ಟೂಮ್ ಹಾಗೂ ಅಲ್ಪಷಿರ್ ನಗರಗಳಲ್ಲಿ ಉದ್ಯೋಗಕ್ಕಾಗಿ ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಹಳ್ಳಿಯ ಹಕ್ಕಿಪಿಕ್ಕಿ ಜನರು ತೆರಳಿದ್ದರು. ಇದೀಗ ಸೂಡಾನ್ ಯುದ್ದ ಭೂಮಿಯಾಗಿ ಮಾರ್ಪಟ್ಟಿದೆ. ಅಲ್ಲಿರುವ ಸಂತ್ರಸ್ತರು ತಮ್ಮ ಕುಟುಂಬದವರಿಗೆ ಕರೆ ಮಾಡಿ ಹೇಗಾದರೂ ಮಾಡಿ ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಅಂಗಲಾಚುತ್ತಿದ್ದಾರೆ.
ಈ ಸಂಬಂಧ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಹಳ್ಳಿಯ ಗ್ರಾಮಗಳಿಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮತ್ತು ಸೂಡಾನ್‍ನಲ್ಲಿರುವ ಸಿಲುಕಿರುವವರೊಂದಿಗೆ ಮಾತನಾಡಿ ಧೈರ್ಯ ಹೇಳಿದರು. ಅಸ್ತಾಪನಹಳ್ಳಿಯಿಂದ ಸುಮಾರು 10 ಮತ್ತು ಗೋಪನಾಳ್ ಗ್ರಾಮದಿಂದ 29 ಜನರು ಸೇರಿ ಒಟ್ಟು 39 ಜನ ಉದ್ಯೋಗಕ್ಕಾಗಿ ಸೂಡಾನ್‌ಗೆ ತೆರಳಿದ್ದಾರೆ ಎಂದು ಡಿಸಿ ತಿಳಿಸಿದರು.