ಕರ್ನಾಟಕ

karnataka

ETV Bharat / state

ಭಾರಿ ಮಳೆಗೆ ಮೈದುಂಬಿತು 'ಸೂಳೆಕೆರೆ'.. ದಶಕದ ಬಳಿಕ ಏಷ್ಯಾದ 2ನೇ ಅತಿ ದೊಡ್ಡ ಕೆರೆ ಭರ್ತಿ - ಶಾಂತಿಸಾಗರ ಭರ್ತಿ

ದಾವಣಗೆರೆಯಲ್ಲಿ ಭಾರಿ ಮಳೆ ಹಿನ್ನೆಲೆ ಬರೋಬ್ಬರಿ 10 ವರ್ಷಗಳ ಬಳಿಕ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ 'ಸೂಳೆಕೆರೆ' ತುಂಬಿ ಕೋಡಿ ಬಿದ್ದಿದೆ.

sulekere
ಸೂಳೆಕೆರೆ ಭರ್ತಿ

By

Published : Oct 20, 2021, 3:36 PM IST

ದಾವಣಗೆರೆ:ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂದೇ ಪ್ರಸಿದ್ಧಿ ಪಡೆದಿರುವ ಬೆಣ್ಣೆನಗರಿ ದಾವಣಗೆರೆಯ ಸೂಳೆಕೆರೆ ಒಂದು ದಶಕದ ಬಳಿಕ ಭರ್ತಿಯಾಗಿದೆ.

ವೇಶ್ಯೆ ಶಾಂತವ್ವ ನಿರ್ಮಿಸಿದ ಕೆರೆ:

ಮೈ ಮಾರಿಕೊಂಡು ಬದುಕಿದ್ದ ಮಹಿಳೆಯ ಕಾಳಜಿಯಿಂದ ಈ ಕೆರೆ ನಿರ್ಮಾಣವಾಗಿತ್ತು. ಅಂದು ವೇಶ್ಯೆ ಶಾಂತವ್ವ ನಿರ್ಮಿಸಿದ ಕೆರೆ ಇಂದು 612 ಗ್ರಾಮಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ. 10 ಸಾವಿರ ಎಕರೆ ಭೂಮಿಗೆ ನೀರುಣಿಸುತ್ತಿದ್ದ ಈ ಕೆರೆ ಕಳೆದ ಒಂದು ದಶಕದ ನಂತರ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿದೆ.

ಸೂಳೆಕೆರೆ ಭರ್ತಿ

ಏಷ್ಯಾದ 2ನೇ ದೊಡ್ಡ ಕೆರೆ:

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿರುವ ಕೆರೆ ಏಷ್ಯಾದ ನಂಬರ್ ಒನ್ ದೊಡ್ಡ ಕೆರೆ ಆದ್ರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಸೂಳೆ ಕೆರೆ ಇಡೀ ಏಷ್ಯಾಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದೆ. ಸುಮಾರು 60 ಕಿಲೋ ಮೀಟರ್ ಸುತ್ತಳತೆ ಇರುವ ಈ ಸೂಳೆಕೆರೆ ಒಟ್ಟು ಮೂರು ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

ಕಣ್ಮನ ಸೆಳೆಯುವ ಜಲರಾಶಿ:

ಕೆರೆ ಬಳಿ ನಿಂತು ಕಣ್ಣು ಹಾಯಿಸಿದಷ್ಟು ದೂರ ನೀರೇ ಕಾಣಸಿಗುತ್ತಿದ್ದು, ಸುತ್ತಮುತ್ತ ಹಸಿರು ತಪ್ಪಲು ಕಣ್ಣಿಗೆ ಆನಂದವನ್ನುಂಟುಮಾಡುತ್ತದೆ. ಕೆರೆ ಪಕ್ಕದ ಗುಡ್ಡ ಸುತ್ತು ಹಾಯ್ದು ಬರುವ ಚನ್ನಗಿರಿ-ದಾವಣಗೆರೆ ರಸ್ತೆಯನ್ನ ಗುಡ್ಡದ ಮೇಲೆ ನಿಂತು ಕೆರೆಯನ್ನು ವೀಕ್ಷಿಸಿದ್ರೇ, ಇಡೀ ಕೆರೆ ಹೃದಯದ ಆಕಾರದಲ್ಲಿ ಕಾಣುವುದು ಇನ್ನೊಂದು ವಿಶೇಷವಾಗಿದೆ. ಈ ಪ್ರಕೃತಿ ಮಾತೆಯ ಮಡಿಲಿನಲ್ಲಿ ಹಾಸಿಕೊಂಡಿರುವ ಜಲರಾಶಿ ಕಣ್ಮನ ಸೆಳೆಯುತ್ತೆ. ಇತ್ತೀಚಿಗೆ ಸುರಿದ ಮಳೆಗೆ ಕೆರೆ ಅಂಗಳದಲ್ಲಿ ಸಂಭ್ರಮ ಸೃಷ್ಟಿಯಾಗಿದ್ದು, ಈಗ ಕೆರೆಯಲ್ಲಿ 27 ಅಡಿ ನೀರು ಇದೆ. ಮಳೆಯಿಂದ ಹಿರೇಹಳ್ಳ, ಹರಿದ್ರಾವತಿ ಹಾಗೂ ತುಮರು ಹಳ್ಳಗಳ ನೀರು ತುಂಬಿ ಹರಿದ ಪ್ರಯುಕ್ತ ಸೂಳೆಕೆರೆಗೆ ಹೊಸ ಕಳೆ ಬಂದಿದೆ.

ಪ್ರವಾಸಿ ತಾಣ:

ನಿಜಕ್ಕೂ ಇದೊಂದು ಪ್ರವಾಸಿ ತಾಣವಾಗಿದ್ದು, ಈಗ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಜಗಳೂರು ತಾಲೂಕು ಹಾಗೂ ಪಕ್ಕದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕಿನ 612 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿರುವುದು ಇಲ್ಲಿಂದಲೇ. ಇಂತಹ ದೊಡ್ಡ ಕೆರೆ ಸಂಪೂರ್ಣ ಭರ್ತಿಯಾಗುವುದು ಅಪರೂಪ. 1999ರಲ್ಲಿ ನೀರು ಜಾಸ್ತಿ ಬಂದಿತ್ತು, ಆದ್ರೆ ಕೆರೆ ಭರ್ತಿಯಾಗಿರಲಿಲ್ಲ. 2014ರಲ್ಲೂ ನೀರು ಬಂದಿದ್ದರೂ, ಈ ಪ್ರಮಾಣದಲ್ಲಿ ಕೋಡಿ ಬೀಳುವಷ್ಟು ಇರಲಿಲ್ಲ. ಇದೀಗ ಕೆರೆ ಸಂಪೂರ್ಣ ತುಂಬಿದ್ದು, ಇದರಿಂದ ಕೆರೆ ಒತ್ತುವರಿ ಮಾಡಿಕೊಂಡವರಿಗೆ ಹಿನ್ನೀರಿನ ಕಾಟ ಸಹ ಶುರುವಾಗಿದೆ. ಇಂಥ ದೊಡ್ಡ ಕೆರೆ ನಿರ್ಮಿಸಿ ಜನರಿಗೆ ಆಸರೆಯಾದ ವೇಶ್ಯೆ ಶಾಂತವ್ವನನ್ನ ಜನ ಪ್ರತಿನಿಧಿಗಳು ನೆನೆದು ಗೌರವ ಸಲ್ಲಿಸುತ್ತಾರೆ.

ಇತಿಹಾಸ ಪ್ರಸಿದ್ಧ 'ಸೂಳೆಕೆರೆ' ಹೆಸರು ಬದಲಿಸಿ ಶಾಂತಿ ಸಾಗರ ಎಂದು ಕೆಲವರು ಮರುನಾಮಕರಣ ಮಾಡಿದ್ದರು. ಆದ್ರೆ ಖ್ಯಾತ ಸಂಶೋಧಕ ಹಾಗೂ ದಾವಣಗೆರೆ ಜಿಲ್ಲೆಯವರೇ ಆದ ಚಿದಾನಂದ ಮೂರ್ತಿ ಅವರು ಹೋರಾಟ ಮಾಡಿ ಇದಕ್ಕೆ ಸೂಳೆಕೆರೆ ಹೆಸರೇ ಇರಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ 'ಸೂಳೆಕೆರೆ' ಎಂಬ ಹೆಸರು ಮುಂದಿನ ಜನಾಂಗಕ್ಕೂ ಉಳಿಯುವಂತಾಗಿದೆ.

ABOUT THE AUTHOR

...view details