ಕರ್ನಾಟಕ

karnataka

ETV Bharat / state

Power cut: ನಿಯಮ ಪಾಲಿಸದೆ ಮನೆಯ ವಿದ್ಯುತ್​ ಸಂಪರ್ಕ ಕಡಿತ : ಬೆಸ್ಕಾಂಗೆ 25 ಸಾವಿರ ರೂ. ದಂಡ - ನಿಯಮ ಪಾಲಿಸದೆ ಮನೆಯ ವಿದ್ಯುತ್​ ಸಂಪರ್ಕ ಕಡಿತ

ಅಧಿಕಾರಿಗಳು ನಿಯಮ ಪಾಲನೆ ಮಾಡದೆ ವಿದ್ಯುತ್​ ಸಂಪರ್ಕ ಕಡಿತ ಮಾಡಿದ ಪ್ರಕರಣವೊಂದರಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಬೆಸ್ಕಾಂಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

25-thousand-fine-for-bescom-for-disconnecting-electricity-connection-without-rules
ನಿಯಮ ಪಾಲಿಸದೆ ಮನೆಯ ವಿದ್ಯುತ್​ ಸಂಪರ್ಕ ಕಡಿತ : ಬೆಸ್ಕಾಂಗೆ 25 ಸಾವಿರ ದಂಡ

By

Published : Jun 24, 2023, 6:39 PM IST

Updated : Jun 24, 2023, 7:23 PM IST

ಗ್ರಾಹಕ ಪವನ್ ರೇವಣಕರ್​

ದಾವಣಗೆರೆ:ನಿಯಮ ಪಾಲಿಸದೇ ಮನೆಯ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಪ್ರಕರಣ ಸಂಬಂಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಬೆಸ್ಕಾಂಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್​ನ ಮನೆಯೊಂದರಲ್ಲಿ ಅಧಿಕಾರಿಗಳು ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಕುರಿತಂತೆ ಗ್ರಾಹಕರೊಬ್ಬರು ಗ್ರಾಹಕರ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು.

ಪವನ್ ರೇವಣಕರ್​ ಎಂಬುವರಿಗೆ 2022ರ ಆಗಸ್ಟ್ ತಿಂಗಳಲ್ಲಿ 1,454 ರೂಪಾಯಿ ವಿದ್ಯುತ್​ ಬಿಲ್ ಬಂದಿತ್ತು. ಆದರೆ ಕಾರಣಾಂತರಗಳಿಂದ ಪವನ್ ವಿದ್ಯುತ್ ಬಿಲ್ ಪಾವತಿ ಮಾಡಿರಲಿಲ್ಲ. ವಿದ್ಯುತ್ ಬಿಲ್ ಪಾವತಿಸದ ಕಾರಣ ಬೆಸ್ಕಾಂ ಸಿಬ್ಬಂದಿಯು ಪವನ್​ ಮನೆಗೆ ವಿದ್ಯುತ್​ ಸಂಪರ್ಕ ಕಟ್​ ಮಾಡಿದ್ದರು. ಬಿಲ್ ಕಟ್ಟದೆ ಇದ್ದಾಗ ಅಂತಿಮ ದಿನ ನಿಗದಿಗೊಳಿಸಿ ಪಾವತಿ ಮಾಡಲು ಕಾಲವಕಾಶ ನೀಡದೆ ಅಧಿಕಾರಿಗಳು ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿ ಪವನ್​ ಗ್ರಾಹಕರ ಪರಿಹಾರ ವೇದಿಕೆಗೆ ದೂರು ನೀಡಿದ್ದರು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​​ಸಿ) ಕೋಡ್ 2004ರ ಸೆಕ್ಷನ್ 9 ನಿಯಮದ ಅಡಿ ಆದೇಶವನ್ನು ಅಧಿಕಾರಿಗಳು ಉಲ್ಲಂಘನೆ ಮಾಡಿದ್ದಾರೆ ಎಂದು ಗ್ರಾಹಕ ಪವನ್ ದಾವೆ ಹೂಡಿದ್ದರು.‌ ವಿಶೇಷವೆಂದರೆ, ಪವನ್ ತಮ್ಮ ದಾವೆಗೆ ವಾದ ಮಾಡಲು ಯಾವುದೇ ವಕೀಲರನ್ನು ನೇಮಕ ಮಾಡಿಕೊಳ್ಳದೆ, ತಾವೇ ವಕಾಲತ್ತು ಮಾಡಿ ಬೆಸ್ಕಾಂಗೆ ದಂಡ ವಿಧಿಸುವಂತೆ ಮಾಡಿದ್ದಾರೆ. ಪ್ರಕರಣ ಸಂಬಂಧ ತಮಗಾದ ಆನಾನುಕೂಲತೆ ಹಾಗೂ ಮಾನಸಿಕ ಹಿಂಸೆಗಾಗಿ 5 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ವೇದಿಕೆಯ ಮೂಲಕ ಆಗ್ರಹಿಸಿದ್ದರು. ಅಧಿಕಾರಿಗಳಿಂದ ನಿಯಮ ಉಲ್ಲಂಘನೆ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಬೆಸ್ಕಾಂ 20 ಸಾವಿರ ರೂಪಾಯಿ ದಂಡ ಪಾವತಿಸಬೇಕು ಹಾಗೂ ದೂರುದಾರನಿಗೆ 5,000 ರೂ. ಪರಿಹಾರ ನೀಡುವಂತೆ ಮಹತ್ವದ ಆದೇಶ ನೀಡಿದೆ.

ಗ್ರಾಹಕ ಪವನ್ ಹೇಳುವುದೇನು?:ದಾವಣಗೆರೆಯಲ್ಲಿ ದೂರುದಾರ ಪವನ್ ರೇವಣಕರ್ ಈಟಿವಿ ಭಾರತದೊಂದಿಗೆ ಮಾತನಾಡಿ, ''ಬಿಲ್ ಕಟ್ಟಿಲ್ಲ ಎಂದು ಅಧಿಕಾರಿಗಳು ನಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತ​ ಮಾಡಿದ್ದರು. ಬಳಿಕ ಬಿಲ್ ಪಾವತಿ ಮಾಡುತ್ತೇನೆ ಎಂದರೂ ಸಮಯಾವಕಾಶ ನೀಡದೆ ಕಡಿತಗೊಳಿಸಲಾಗಿತ್ತು. ಹೀಗಾಗಿ ನಾನು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದೆ. ಇದೀಗ ವೇದಿಕೆಯಿಂದ ತೀರ್ಪು ಬಂದಿದೆ. ಈ ದಾವೆಯನ್ನು ನಾನೇ ವಕಾಲತ್ತು ಮಾಡಿಕೊಳ್ಳುವ ಮೂಲಕ ಯಶಸ್ಸು ಸಾಧಿಸಿದ್ದೇನೆ.‌ ನನ್ನ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಗ್ರಾಹಕರ ವೇದಿಕೆಗೆ 2020ರ ಸೆಪ್ಟಂಬರ್​​ ತಿಂಗಳಿನಲ್ಲಿ ದೂರು ನೀಡಿದ್ದೆ, ಮೊನ್ನೆ ಜೂನ್​ 21ರಂದು ತೀರ್ಪು ನೀಡಿದೆ'' ಎಂದು ಹೇಳಿದರು.

ಇದನ್ನೂ ಓದಿ:ಆರೋಗ್ಯ ವಿಮೆ ಪಾವತಿಸದ ವಿಮಾ ಕಂಪನಿಗೆ ದಂಡ ಜಡಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

Last Updated : Jun 24, 2023, 7:23 PM IST

ABOUT THE AUTHOR

...view details