ದಾವಣಗೆರೆ :ಕೊರೊನಾ ಸೋಂಕು ಬಂದಾಗಿನಿಂದ ಈವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1500 ಕೋಟಿ ರೂ. ನಷ್ಟವಾಗಿದೆ. ರಾಜ್ಯ ಸರ್ಕಾರ ₹1350 ಕೋಟಿ ಬಿಡುಗಡೆ ಮಾಡಿದ್ದರಿಂದಾಗಿ ಚಾಲಕರು, ನಿರ್ವಾಹಕರು ಸೇರಿದಂತೆ ಎಲ್ಲಾ ಸಿಬ್ಬಂದಿಗೆ ವೇತನ ನೀಡಲಾಗಿದೆ. ಈ ಹಿಂದೆ "ನೋ ಲಾಸ್ ನೋ ಪ್ರಾಫಿಟ್'' ಆಗಿತ್ತು. ಆದರೆ, ಈಗ ನಷ್ಟದಲ್ಲಿ ನಡೆಯುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗ ಸಾರಿಗೆ ಬಸ್ಗಳ ಓಡಾಟ ಆರಂಭವಾಗಿದ್ದರೂ ಡೀಸೆಲ್ಗೆ ಮಾತ್ರ ಆಗುತ್ತಿದೆ. ನೌಕರರ ಸಂಬಳ, ಇತರೆ ಖರ್ಚು ಭರಿಸಲು ಸಾಕಾಗುತ್ತಿಲ್ಲ. ಹೊಸ ರೂಟ್ ಹಾಗೂ ಹೊಸ ಬಸ್ಗಳ ಖರೀದಿ ಸದ್ಯಕ್ಕೆ ಮಾಡುವುದಿಲ್ಲ. ಶೇ. 50ರಷ್ಟು ಆದಾಯ ಬರುತ್ತಿದ್ದು, ಇನ್ನು ಮುಂದೆ ಬಸ್ಗಳಲ್ಲಿ ಜನರ ಓಡಾಟಕ್ಕೆ ಮಿತಿ ಇರಲ್ಲ ಎಂದು ಹೇಳಿದರು.
ಲಾಕ್ಡೌನ್ ವೇಳೆ ಮೂರು ತಿಂಗಳು ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಭಾರೀ ನಷ್ಟ ಸಂಭವಿಸಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ ಕಾರಣದಿಂದ ಸಂಬಳ ನೀಡಲು ಸಾಧ್ಯವಾಗಿದೆ. ಈ ತಿಂಗಳ ವೇತನ ಕೊಡಲು ಕಷ್ಟವಾಗಿದೆ. ಉತ್ತಮ ಸೇವೆ ಜನರಿಗೆ ನೀಡುವುದಷ್ಟೇ ನಮ್ಮ ಉದ್ದೇಶ. ಖಾಸಗಿ ಬಸ್ಗಳ ರೀತಿ ಲಾಭದ ದೃಷ್ಟಿಕೋನ ಇಟ್ಟುಕೊಂಡು ಮಾಡಲಾಗುತ್ತಿಲ್ಲ. ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಪ್ರಯಾಣಿಕರು ಪ್ರಯಾಣಿಸಬೇಕು ಎಂದರು.
ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ ರಾಜ್ಯದಲ್ಲಿ ಕೆಲವೆಡೆ ಹೊರತುಪಡಿಸಿದ್ರೆ ಎಲ್ಲಾ ಕಡೆಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಆ ಭಾಗಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರೈತರು, ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ಈಗಾಗಲೇ, ಆಂಧ್ರಪ್ರದೇಶ, ತಮಿಳುನಾಡಿಗೆ ಬಸ್ಗಳ ಸಂಚಾರ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ರಾಜ್ಯದಿಂದ ಮಹಾರಾಷ್ಟ್ರಕ್ಕೂ ಬಸ್ಗಳ ಸಂಚಾರ ಆರಂಭವಾಗಲಿದೆ ಎಂದರು.