ಮಂಗಳೂರು (ದ.ಕ): ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಪಕ್ಷ ಸೇರುತ್ತಾರೆ ಎಂಬುದು ಅಚ್ಚರಿಯ ವಿಷಯವಲ್ಲ ಎಂದು ಜೆಡಿಎಸ್ ನಾಯಕ ವೈಎಸ್ವಿ ದತ್ತಾ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಅಂದ ಮೇಲೆ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅವರು ಬರುವುದು ಅಚ್ಚರಿಯಿಲ್ಲ. ಆದರೆ ಈ ವಿಚಾರ ಅರ್ಧ ತೆರೆದ ಬಾಗಿಲು, ಅರ್ಧ ಮುಚ್ಚಿದ ಬಾಗಿಲಿನಂತೆ ಎಂದರು.
ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನವಾಗಲಿದೆ ಎಂಬ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ವಿಲೀನ ಇಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಇದರಿಂದ ನಮಗೆ ನೆಮ್ಮದಿ ಮೂಡಿದೆ. ವಿಲೀನ ಆಗಬಾರದು, ಸ್ವತಂತ್ರವಾಗಿರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು.
ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಕುರಿತು ವೈಎಸ್ವಿ ದತ್ತಾ ಪ್ರತಿಕ್ರಿಯೆ ಪ್ರಾದೇಶಿಕವಾಗಿ ಜೆಡಿಎಸ್ ಐಡೆಂಟಿಟಿ ಉಳಿಸಿಕೊಳ್ಳಲಿದೆ. ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳಬೇಕಿದೆ. ಜೆಡಿಎಸ್ನಿಂದ ಹೊರ ಹೋದವರು ಹಲವು ಮಂದಿ ಇದ್ದಾರೆ. ಅವರೆಲ್ಲರೂ ಕೂತು ಬಿಚ್ಚು ಮನಸ್ಸಿನಿಂದ ಮಾತನಾಡಬೇಕಿದೆ. ಜನತಾ ಪರಿವಾರ ಮತ್ತೆ ಒಂದಾಗಬೇಕಿದೆ ಎಂದರು.
ಇದನ್ನೂ ಓದಿ:ನಾವೇನಿದ್ದರೂ ಸೇರಿಸುವುದಕ್ಕೆ ನೋಡುವವರು, ಮುರಿಯುವವರಲ್ಲ: ಸಿಎಂ ಇಬ್ರಾಹಿಂ
ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಿಸಲಿ
ಶಾಲಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಹೀಗೆಯೇ ನಡೆಯಬೇಕು ಎಂದುಕೊಳ್ಳುವುದನ್ನು ಬಿಡಲಿ. ಶಾಲಾರಂಭದ ಬಗ್ಗೆ ಸಾಧಕ ಬಾಧಕ ಚರ್ಚೆಯಾಗಲಿ. ಈ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಿಸಲಿ. ಹಲವು ರಾಜ್ಯಗಳು ಇದನ್ನು ಮಾಡಿವೆ ಎಂದರು.
ರಾಜ್ಯ ಸರ್ಕಾರದಿಂದ ಕನ್ನಡ ವಿರೋಧಿ ನಿಲುವು
ಯಾವುದೇ ಸರ್ಕಾರಗಳು ಅಧಿಕಾರದಲ್ಲಿದ್ದರೆ ಅದು ಯಾವತ್ತೂ ಕನ್ನಡ ಪರವಾಗಿರಬೇಕು. ಆದರೆ ಕನ್ನಡಕ್ಕಾಗಿಯೇ ಇರುವ ಹಂಪಿ ವಿಶ್ವವಿದ್ಯಾಲಯದ ಅನುದಾನ ಕಡಿತ ಮಾಡುವ ಮೂಲಕ ಸರ್ಕಾರ ಕನ್ನಡ ವಿರೋಧಿ ನಿಲುವು ತಾಳಿದೆ. ನಾನು ಸಂಸ್ಕೃತ ವಿರೋಧಿಯು ಅಲ್ಲ, ಪರವು ಅಲ್ಲ. ಆದರೆ ಕನ್ನಡಕ್ಕೆ ಅನುದಾನ ಕಡಿತಗೊಳಿಸಿ ಸಂಸ್ಕೃತ ವಿವಿಗೆ ಹೆಚ್ಚು ಅನುದಾನ ಕೊಡುತ್ತಿರುವುದು ಸರಿಯಲ್ಲ. ಸರ್ಕಾರದ ಮರು ಆಲೋಚಿಸಿ ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡಲಿ ಎಂದರು.
ಮೆಸ್ಕಾಂ- ಕಿಯೋನಿಕ್ಸ್ ಗುತ್ತಿಗೆ ಅವಧಿ ಮುಂದುವರಿಯಲಿ
ಮೆಸ್ಕಾಂಗೆ ಮಾನವ ಸಂಪನ್ಮೂಲ ನೀಡುತ್ತಿರುವ ಕಿಯೋನಿಕ್ಸ್ನೊಂದಿಗೆ ಗುತ್ತಿಗೆ ಅವಧಿ ಮುಗಿಯುತ್ತಿದೆ. ಮೆಸ್ಕಾಂ ಇದೀಗ ಸರ್ಕಾರಿ ಸ್ವಾಮ್ಯದ ಕಿಯೋನಿಕ್ಸ್ ಬದಲಿಗೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ಮುಂದಾಗಿದೆ. ಇದರಿಂದ ಕಿಯೋನಿಕ್ಸ್ನಲ್ಲಿರುವ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೊಳಗಾಗಲಿದ್ದಾರೆ. ಹಾಗಾಗಿ ಕಿಯೋನಿಕ್ಸ್ ಜೊತೆಗೆ ಗುತ್ತಿಗೆ ಮುಂದುವರೆಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.