ಕಡಬ(ದಕ್ಷಿಣ ಕನ್ನಡ): ಸೌದಿ ಅರೇಬಿಯಾದ ಜೈಲಿನಲ್ಲಿ 11 ತಿಂಗಳ ಕಾಲ ಸೆರೆಮನೆ ವಾಸದ ಬಳಿಕ ಈಗ ಬಂಧಮುಕ್ತವಾಗಿ ಭಾರತಕ್ಕೆ ವಾಪಸಾಗಿರುವ ಕಡಬದ ಚಂದ್ರಶೇಖರ್ ಅವರು ಸುರಕ್ಷಿತವಾಗಿ ಕಡಬ ತಾಲೂಕಿನ ಐತೂರಿನಲ್ಲಿರುವ ತಮ್ಮ ಮನೆ ಸೇರಿದ್ದಾರೆ. ಸೋಮವಾರ ರಾತ್ರಿ ಚಂದ್ರಶೇಖರ್ ಅವರು ವಿಮಾನದಲ್ಲಿ ಸೌದಿಯ ರಿಯಾದ್ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್ ಸೇರಿದಂತೆ ಹಲವರು ಅವರನ್ನು ಸ್ವಾಗತಿಸಿದರು. ತಾಯಿ ಸಂತೋಷದಿಂದ ಮಗನನ್ನು ಆಲಂಗಿಸಿ ಬರಮಾಡಿಕೊಂಡರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಚಂದ್ರಶೇಖರ್ ಅವರು, "ಮಾಧ್ಯಮಗಳಲ್ಲಿ ನನ್ನ ಬಂಧನದ ಬಗ್ಗೆ ವರದಿ ಬಂದಿರುವ ಕಾರಣ ನನ್ನ ಬಿಡುಗಡೆ ಸುಲಭವಾಯಿತು. ಸೌದಿ ಅರೇಬಿಯಾದಲ್ಲಿರುವ ಮಂಗಳೂರಿನವರು ತನ್ನ ಬಿಡುಗಡೆಗೆ ನೆರವಾಗಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಇದೀಗ ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದೆ. ಮುಂದೆ ನನಗೆ ಬೇರೆ ಉದ್ಯೋಗ ಸಿಗುವ ಭರವಸೆ ಇದೆ. ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿದ್ದಾಗ ತುಂಬಾ ಕಷ್ಟ ಆಗಿತ್ತು. ಗೆಳೆಯರು ಮನೆಯವರು ಸೇರಿದಂತೆ ಯಾರ ಹತ್ತಿರವೂ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ನನಗೆ ಮೊಬೈಲ್ ಕೊಟ್ಟರೂ ಎರಡೇ ನಿಮಿಷ ಮಾತನಾಡಬಹುದಿತ್ತು. ತಪ್ಪು ಮಾಡದೇ ನಾನು ಸೆರೆಮನೆ ವಾಸ ಅನುಭವಿಸಿದೆ" ಎಂದು ಹೇಳಿದರು.
ಸೌದಿಯಲ್ಲಿರುವ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು. ಚಂದ್ರಶೇಖರ್ ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ಸೌದಿ ರಿಯಾಲ್( ಭಾರತೀಯ ರೂಪಾಯಿಯಲ್ಲಿ ಸುಮಾರು 5 ಲಕ್ಷ ರೂ.) ವರ್ಗಾವಣೆಯಾಗಿತ್ತು. ಇದು ದಾಖಲೆಗಳನ್ನು ನಕಲಿ ಮಾಡಿ ಹಣ ದೋಚುವ ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರಶೇಖರ್ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು. ಚಂದ್ರಶೇಖರ್ ಅವರ ವಾದವನ್ನು ಪರಿಗಣಿಸದೆ ಪೊಲೀಸರು ಅವರನ್ನು ಜೈಲಿಗೆ ಹಾಕಿದ್ದರು. ಬೆಂಗಳೂರಿನಲ್ಲಿದ್ದ ಚಂದ್ರಶೇಖರ್ ಬಡ್ತಿ ಪಡೆದು ಕೆಲಸಕ್ಕಾಗಿ 2022ರಲ್ಲಿ ಸೌದಿ ಅರೇಬಿಯಾಗೆ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ ಎಂಬ ಕಂಪನಿಯಲ್ಲಿ ಕೆಲಸಕ್ಕಿದ್ದರು.
2022 ನವೆಂಬರ್ನಲ್ಲಿ ಅವರು ಮೊಬೈಲ್ ಹಾಗೂ ಸಿಮ್ ಖರೀದಿಗೆಂದು ರಿಯಾದ್ನ ಅಂಗಡಿಗೆ ತೆರಳಿ, ಸಹಿ, ಬೆರಳಚ್ಚು ಹಾಗೂ ಇತರ ವಿವರಗಳನ್ನು ಎರಡು ಬಾರಿ ನೀಡಿದ್ದರು. ನಂತರ ಮೊಬೈಲ್ಗೆ ಬಂದ ಕರೆಯೊಂದಕ್ಕೆ, ಹೊಸ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ಜೊತೆಗೆ ಒಟಿಪಿಯನ್ನೂ ಹೇಳಿದ್ದರು. ಆ ವೇಳೆ ಚಂದ್ರಶೇಖರ್ ಅವರ ಖಾತೆ ಹ್ಯಾಕ್ ಆಗಿತ್ತು. ಇದಾದ ಒಂದು ವಾರದಲ್ಲಿ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು. ಪೊಲೀಸರು ಬಂಧಿಸಲು ಬಂದಾಗಲೇ ಚಂದ್ರಶೇಖರ್ ಅವರಿಗೆ ಇದು ಅರಿವಿಗೆ ಬಂದಿತ್ತು.