ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರಿನ ಕಂಪ ಎಂಬಲ್ಲಿ 23ರ ಹರೆಯದ ಯುವತಿಯನ್ನು ಮನೆಯ ಅಂಗಳದಲ್ಲಿ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆ. ಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ಬಿಎಸ್ಸಿ ಪದವೀಧರೆಯಾದ ಜಯಶ್ರೀ ಮತ್ತು ಬಂಧಿತ ಆರೋಪಿ ಉಮೇಶ್ ಇಬ್ಬರ ಸ್ನೇಹಿತರು. ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರು ಮದುವೆ ಮಾಡಿಕೊಳ್ಳಬೇಕೆಂಬ ಆಸೆಯೂ ಇತ್ತು. ಆದ್ರೆ ಇತ್ತೀಚೆಗೆ ಜಯಶ್ರೀಗೆ ಉಮೇಶ್ ಗುಣ ಮತ್ತು ನಡತೆ ಬಗ್ಗೆ ಇಷ್ಟವಾಗಿರಲಿಲ್ಲ. ಹೀಗಾಗಿ ಕಳೆದ ವರ್ಷ ನವೆಂಬರ್ನಲ್ಲಿ ಉಮೇಶ್ನಿಂದ ಜಯಶ್ರೀ ದೂರವಾಗಿದ್ದಳು.
ಪ್ರೀತಿ ವಿಷಯದಲ್ಲಿ ಮನಸ್ತಾಪ ಬರುವುದು ಸಾಮಾನ್ಯ. ಜಯಶ್ರೀ ದೂರವಾದ ಬಳಿಕ ಉಮೇಶ್ ನೊಂದಿದ್ದಾನೆ. ಬಳಿಕ ಉಮೇಶ್ ಸಹ ಜಯಶ್ರೀ ಮನವೋಲಿಸಲು ಯತ್ನಿಸಿದಂತೆ ಕಾಣುತ್ತದೆ. ಆದ್ರೆ ಇವರ ಮಾತುಕತೆ ಸಫಲವಾಗಿಲ್ಲ ಎಂಬುದು ತಿಳಿಯುತ್ತದೆ. ಇದರಿಂದ ಕೋಪಗೊಂಡ ಉಮೇಶ್ ಆಕೆಯನ್ನು ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ಏನಿದು ಪ್ರಕರಣ?: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ಸಮೀಪ ಯುವತಿಗೆ ವ್ಯಕ್ತಿಯೊಬ್ಬ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಜ.17ರಂದು ಮನೆಯಂಗಳದಲ್ಲೇ ನಡೆದಿತ್ತು. ಜಯಶ್ರೀ (23) ಮೃತಪಟ್ಟ ಯುವತಿ. ಯುವತಿ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಈ ವೇಳೆ ಮಗಳು ಜೋರಾಗಿ ಚೀರಿಕೊಂಡ ಶಬ್ಧ ಕೇಳಿದೆ. ತಾಯಿ ಹೊರಗಡೆ ಓಡಿ ಬಂದಿದ್ದಾರೆ. ಅಂಗಳಕ್ಕೆ ಬಂದು ನೋಡಿದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಯುವತಿಯನ್ನು ಆಸ್ಪತ್ರೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೆ ಯುವತಿ ಮೃತಪಟ್ಟಿದ್ದಳು.