ಪುತ್ತೂರು (ದಕ್ಷಿಣಕನ್ನಡ): ಯುವ ವಿಜ್ಞಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ನಡೆದಿದ್ದು, ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕಲ್ಲರ್ಪೆ ನಿವಾಸಿ ಶ್ರೀಧರ್ ಆಚಾರ್ಯ ಎಂಬವರ ಪುತ್ರ ಭರತ್ ಕಲ್ಲರ್ಪೆ (24) ಆತ್ಮಹತ್ಯೆಗೆ ಶರಣಾದ ಯುವಕ.
ಮೃತ ಭರತ್ ಹೈದರಾಬಾದ್ನ ಖಾಸಗಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಅವರು ಉದ್ಯೋಗಕ್ಕೆ ಸೇರಿಕೊಂಡಿದ್ದರು. ಕಳೆದ ಒಂದು ವಾರದ ಹಿಂದೆ ಊರಿಗೆ ಆಗಮಿಸಿದ್ದರು. ತಾವು ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ, ರಾಜೀನಾಮೆ ಸ್ವೀಕರಿಸಿರಲಿಲ್ಲ ಎಂದು ಹೇಳಲಾಗಿದೆ.
ಬುಧವಾರ ರಾತ್ರಿ ಸಂಸ್ಥೆಯ ಕಚೇರಿಯಿಂದ ದೂರವಾಣಿ ಕರೆ ಬಂದಿದ್ದು, ಬಳಿಕ ತಡರಾತ್ರಿ ಈ ಕೃತ್ಯ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ದಂಪತಿ ಆತ್ಮಹತ್ಯೆ :ಜಿಲ್ಲೆಯ ಕಾಪುವಿನಲ್ಲಿ ಸಮಾಜ ಸೇವಕ, ರಾಜಕೀಯ ಮುಖಂಡ, ನಾಟಕಕಾರ ಕಾಪು ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಂಗಳವಾರ ನಡೆದಿತ್ತು.
ಲೀಲಾಧರ ಶೆಟ್ಟಿಯವರು ಕಾಪುವಿನಲ್ಲಿ ರಂಗ ತರಂಗ ಎಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಸದಾ ಸಮಾಜಪರ ಕಾಳಜಿ ಹೊಂದಿದ್ದ ಅವರು ಯಾವುದೇ ಕ್ಷಣದಲ್ಲಿ ಕೂಡ ಅಶಕ್ತರ ನೆರವಿಗೆ ಧಾವಿಸುತ್ತಿದ್ದರು. ಇವರು ಒಂದು ಬಾರಿ ಕಾಪು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಕೌಟುಂಬಿಕ ಕಾರಣದಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯಲ್ಲಿ ಜೋಡಿ ಆತ್ಮಹತ್ಯೆ :ಪರಸ್ಪರ ಪ್ರೀತಿಸುತ್ತಿದ್ದ ಯುವಕ ಹಾಗೂ ಬಾಲಕಿ ಮನೆಯಿಂದ ಓಡಿ ಹೋಗಿ, ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೌಕಿ ತಾಂಡಾ ಬಳಿ ಮಂಗಳವಾರ ರಾತ್ರಿ ನಡೆದಿತ್ತು. ಆತ್ಮಹತ್ಯೆ ಮಾಡಿಕೊಂಡವರನ್ನು ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿಯ ಬಾಲಕಿ ಹಾಗೂ ಇದೇ ತಾಲೂಕಿನ ಕೊಲ್ಲೂರ್ ಗ್ರಾಮದ ಆಕಾಶ್ (18) ಎಂದು ಗುರುತಿಸಲಾಗಿತ್ತು.
ಯಾದಗಿರಿ ನಗರದಲ್ಲಿ ಐಟಿಐ ಮಾಡುತ್ತಿದ್ದ ಆಕಾಶ್, ಎಂಟನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ ಮಂಗಳವಾರ ರಾತ್ರಿ ಮನೆಯಿಂದ ಓಡಿಹೋದ ಆಕಾಶ್ ಹಾಗೂ ಬಾಲಕಿ ಚೌಕಿ ತಾಂಡಾ ಬಳಿಯ ಯಲ್ಲಮ್ಮದೇವಿ ದೇವಸ್ಥಾನ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದರು..
ಇದನ್ನೂ ಓದಿ :ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ; ಡೆತ್ ನೋಟ್ನಿಂದ ಕಾರಣ ಬಹಿರಂಗ