ಮಂಗಳೂರು:ಪ್ಲಾಸ್ಮಾ ರಕ್ತಕಣಗಳ ಮೂಲಕ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಪದ್ಧತಿ ಆರಂಭವಾದರೂ ಅದರ ದಾನಿಗಳ ಕೊರತೆ ಕಾಡುತ್ತಿದೆ. ಈ ನಡುವೆ ಮಂಗಳೂರಿನ ಯುವಕರಿಬ್ಬರು ಮಂಗಳೂರಿನ ಕೊರೊನಾ ರೋಗಿಗೆ ಬೆಂಗಳೂರಿಗೆ ಹೋಗಿ ಪ್ಲಾಸ್ಮಾ ದಾನ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಆರಂಭವಾಗಿದೆ. ಕೊರೊನಾದಿಂದ ಗುಣಮುಖರಾದವರ ರಕ್ತದಲ್ಲಿರುವ ಪ್ಲಾಸ್ಮಾವನ್ನು ಬೇರ್ಪಡಿಸಿ ಮತ್ತೊಬ್ಬ ಕೊರೊನಾ ರೋಗಿಗೆ ನೀಡುವುದೇ ಪ್ಲಾಸ್ಮಾ ಚಿಕಿತ್ಸೆ. ಯುವ ವಕೀಲ ಜೀಶಾನ್ ಆಲಿ ಮತ್ತು ಗಲ್ಫ್ ಉದ್ಯಮಿ ಹೈದರ್ ಆಲಿ ಎಂಬುವರು ಪ್ಲಾಸ್ಮಾ ದಾನ ಮಾಡಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಟ್ಕಳದ 85 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಬಿ ಪಾಸಿಟಿವ್ ಗ್ರೂಪ್ನ ಪ್ಲಾಸ್ಮಾ ಅನಿವಾರ್ಯ ಎದುರಾಗಿತ್ತು. ಸಾಮಾಜಿಕ ಸೇವಾ ಸಂಸ್ಥೆ ವೆಲ್ನೆಸ್ ಹೆಲ್ಪ್ಲೈನ್ ಗ್ರೂಪ್ ಸಂಯೋಜಕ ಝಕಾರಿಯ ಪರ್ವೇಝ್ ಅವರು ಜೀಸನ್ ಆಲಿ ಮತ್ತು ಹೈದರ್ ಆಲಿ ಅವರನ್ನು ಸಂಪರ್ಕಿಸಿ ಪ್ಲಾಸ್ಮಾ ನೀಡಲು ವಿನಂತಿಸಿದರು. ಅದರಂತೆ ಅವರಿಬ್ಬರು ಬೆಂಗಳೂರಿಗೆ ಹೋದರು.
ಜೀಸನ್ ಆಲಿ ಮತ್ತು ಹೈದರ್ ಆಲಿ ಅವರು ಕೊರೊನಾ ಸೋಂಕಿತರಾಗಿ ಗುಣಮುಖರಾಗಿದ್ದು, ಕೊರೊನಾ ಕಾಣಿಸಿಕೊಂಡ ಸಂದರ್ಭದಲ್ಲಿ ಪ್ಲಾಸ್ಮಾ ದಾನ ಮಾಡಲು ನಿರ್ಧರಿಸಿದ್ದರು. ಗುಣಮುಖರಾದ ಕೊರೊನಾ ರೋಗಿಗಳಿಂದ ಪ್ಲಾಸ್ಮಾ ತೆಗೆಯಲು ಮಂಗಳೂರಿನ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಇದ್ದರೂ ಅದಕ್ಕೆ ಸರ್ಕಾರದ ಅನುಮತಿ ಇಲ್ಲ. ಪ್ಲಾಸ್ಮಾ ಚಿಕಿತ್ಸೆ ನೀಡಬಹುದಾದರೂ ಪ್ಲಾಸ್ಮಾವನ್ನು ಬೆಂಗಳೂರಿನಿಂದ ತರಬೇಕು. ಅದಕ್ಕಾಗಿ ಯುವಕರು ಬೆಂಗಳೂರಿಗೆ ತೆರಳಿ ಪ್ಲಾಸ್ಮಾ ದಾನ ಮಾಡಿ, ಅದನ್ನು ಮಂಗಳೂರಿಗೆ ತಂದು ಕೊರೊನಾ ರೋಗಿಯ ಚಿಕಿತ್ಸೆಗೆ ನೀಡಿದ್ದಾರೆ.
ಪ್ಲಾಸ್ಮಾ ದಾನ ಮಾಡಿದ ಯುವಕರು ಬೆಂಗಳೂರಿಗೆ ಹೋಗಿ ದಾನ ಮಾಡಿದ ಪ್ಲಾಸ್ಮಾವನ್ನು ರಕ್ತ ವರ್ಗೀಕರಣ ಶುಲ್ಕವಾಗಿ ₹ 8,750 ಭರಿಸಿ ಮಂಗಳೂರಿಗೆ ತಂದು ಯುವಕರು ಮಾನವೀಯತೆ ಮೆರೆದಿದ್ದಾರೆ. ಮಂಗಳೂರಿನಲ್ಲಿ ಈ ವ್ಯವಸ್ಥೆ ಇದ್ದರೆ ಇನ್ನಷ್ಟು ಜನರು ಪ್ಲಾಸ್ಮಾ ನೀಡಲು ಮುಂದೆ ಬರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ.