ಮೂಡುಬಿದಿರೆ:ಯುವತಿಯೋರ್ವಳನ್ನು ವಂಚಿಸಿ ಒಟಿಪಿ ಸಂಖ್ಯೆ ಪಡೆದು ಆಕೆಯ ಬ್ಯಾಂಕ್ ಖಾತೆಯಿಂದ 6 ಸಾವಿರ ರೂ. ಲಪಟಾಯಿಸಿದ ಪ್ರಕರಣ ಮೂಡಬಿದಿರೆಯಲ್ಲಿ ನಡೆದಿದೆ.
ಮೂಡುಬಿದಿರೆ ತಾಲೂಕಿನ ಅಲಂಗಾರು ಎಂಬಲ್ಲಿನ ಯುವತಿಯ ಮೊಬೈಲ್ಗೆ ಸೋಮವಾರ ಬೆಳಗ್ಗೆ ತನ್ನನ್ನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡು ವ್ಯಕ್ತಿಯೋರ್ವನು ಕರೆ ಮಾಡಿದ್ದಾನೆ. ಈತ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುತ್ತೆ, ರಿನೀವಲ್ ಮಾಡಬೇಕಾದ್ರೆ ನಿಮ್ಮ ಮೊಬೈಲ್ಗೆ ಒಟಿಪಿ ಬರುತ್ತೆ, ಅದನ್ನು ತಿಳಿಸಿ ಎಂದಿದ್ದಾನೆ. ಆತ ಹೇಳಿದಂತೆ ತನ್ನ ಮೊಬೈಲ್ಗೆ ಬಂದ ಒಟಿಪಿ ಸಂಖ್ಯೆಯನ್ನು ತಿಳಿಸಿದ್ದಾರೆ.
ಇದಾದ ಸ್ವಲ್ಪ ಹೊತ್ತಿನಲ್ಲಿ ಬ್ಯಾಂಕ್ ಖಾತೆಯಿಂದ 6 ಸಾವಿರ ರೂ. ವಿತ್ ಡ್ರಾ ಆಗಿರುವ ಮೆಸೇಜ್ ಬಂದಾಗಲೇ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಬಂದಿದೆ. ತಕ್ಷಣ ಆಕೆ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಸಹ ಅಸಹಾಯಕತೆ ವಕ್ತಪಡಿಸಿದ್ದಾರೆ.
ವಿಜಯಾ ಬ್ಯಾಂಕ್ ಇದೀಗ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡ ಹಿನ್ನೆಲೆ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ಬದಲಾವಣೆಯಾಗಿರುವ ಬಗ್ಗೆ ಗ್ರಾಹಕರ ಮೊಬೈಲ್ಗೆ ಮಾಹಿತಿ ಬರುತ್ತಿವೆ. ಅದಕ್ಕೆ ಸಂಬಂಧಿಸಿ ತನಗೆ ಬ್ಯಾಂಕ್ ಅಧಿಕಾರಿ ಕರೆ ಮಾಡಿರಬಹುದೆಂದು ತಿಳಿದು ಯುವತಿ ಒಟಿಪಿ ಸಂಖ್ಯೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.