ಮಂಗಳೂರು: ಲಾಕ್ಡೌನ್ ಕ್ರಮದಿಂದ ಜನರೇ ಆಹಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಇನ್ನು ಪ್ರಾಣಿ ಪಕ್ಷಿಗಳ ಸ್ಥಿತಿ ಏನಾಗಬೇಡ ಹೇಳಿ? ಈ ಕಾರಣದಿಂದಲೇ ಇಲ್ಲೊಂದು ತಂಡ ಬೀದಿನಾಯಿಗಳಿಗೆ ಉದರಪೂರ್ತಿ ಮಾಂಸದೂಟ ನೀಡುತ್ತಿದೆ.
ವಿನ್ಯಾಸ್ ಶೆಟ್ಟಿ, ಕಿರಣ್ ರಾಜ್, ನಿಶಾಲ್ ಪೂಜಾರಿ, ಪವನ್, ಮೋಹನ್ ದಾಸ್ ಎಂಬ ಐವರು ಯುವಕರ ತಂಡ ಬೀದಿ ನಾಯಿಗಳ ಹೊಟ್ಟೆ ತಣಿಸುವ ಕಾರ್ಯದಲ್ಲಿ ತೊಡಗಿದೆ. ಈ ತಂಡದ ಕಾರು ಬಂದರೆ ಸಾಕು ಬೀದಿ ಬದಿಯ ನಾಯಿಗಳು ಓಡೋಡಿ ಬಂದು ಇವರು ಹಾಕುವ ಬಾಡೂಟಕ್ಕೆ ಮುಗಿ ಬೀಳುತ್ತವೆ.
ಬೀದಿನಾಯಿಗಳಿಗೆ ದಿನನಿತ್ಯ ಬಾಡೂಟ ಹಾಕುವ ಯುವಕರ ತಂಡ ಕೆಲವು ದಿನಗಳಿಂದ ಮಧ್ಯಾಹ್ನದ ಹೊತ್ತು ಬಾಡೂಟ ಒದಗಿಸುವ ಕಾರ್ಯದಲ್ಲಿ ತೊಡಗಿರುವ ಈ ಯುವಕರ ತಂಡ, ದಿನವೊಂದಕ್ಕೆ 10-15 ಕೆ.ಜಿಯಷ್ಟು ಬಾಸ್ಮತಿ ಅಕ್ಕಿಯ ಅನ್ನ ಹಾಗೂ 7-10 ಕೆ.ಜಿಯಷ್ಟು ಚಿಕನ್ ಸಾರು ಮಾಡಿ ನಾಯಿಗಳ ಹೊಟ್ಟೆ ತಣಿಸುವ ಕಾರ್ಯ ಮಾಡುತ್ತಿದೆ. ಈ ಮೂಲಕ ಬೀದಿ ಬದಿಯ ಸುಮಾರು 300-350ರಷ್ಟು ನಾಯಿಗಳಿಗೆ ಬಾಡೂಟ ಒದಗಿಸಲಾಗುತ್ತದೆ.
ಅಲ್ಲದೇ, ದಾರಿಯಲ್ಲಿ ದೊರಕುವ ದನಗಳಿಗೂ ಗಂಜಿ ತಿಳಿ, ಕಲಗಚ್ಚುಗಳನ್ನೂ ಒದಗಿಸಲಾಗುತ್ತಿದೆ. ನಗರದ ತೊಕ್ಕೊಟ್ಟು, ಒಳಪೇಟೆ, ಪಿಲಾರ್, ಕೊಲ್ಯ, ಕೋಟೆಕಾರು, ಮಾಡೂರು, ಕೆ.ಸಿ.ರೋಡ್, ತಲಪಾಡಿ, ಉಚ್ಚಿಲ, ಸೋಮೇಶ್ವರ, ಉಳ್ಳಾಲ ಮುಂತಾದ ಕಡೆಗೆ ಕಾರ್ ಮೂಲಕ ತೆರಳುವ ತಂಡ ಅಲ್ಲಿನ ಬೀದಿ ಬದಿಯ ನಾಯಿಗಳಿಗೆ ಬಾಡೂಟ ನೀಡುತ್ತಿದ್ದಾರೆ.
ತಂಡದ ಸದಸ್ಯ ಕಿರಣ್ ರಾಜ್ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಯಾರೂ ಹೊರಗೆ ಬರಬೇಡಿ ಎಂದು ಮನವಿ ಮಾಡಿದ ಅವರು, ಈ ಲಾಕ್ ಡೌನ್ ಸಂದರ್ಭ ಮೂಕ ಪ್ರಾಣಿಗಳು ಹಸಿವಿನಿಂದ ಕಂಗೆಡಬಾರದೆಂಬ ಉದ್ದೇಶದಿಂದ ನಾವು ಊಟ ಒದಗಿಸುತ್ತಿದ್ದೇವೆ ಎಂದಿದ್ದಾರೆ.