ಸುಳ್ಯ:ಯುವ ಬ್ರಿಗೇಡ್ ವತಿಯಿಂದ ಅಂಧ ವ್ಯಕ್ತಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದ್ದು, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಮನೆಯನ್ನು ಹಸ್ತಾಂತರ ಮಾಡಿದ್ದಾರೆ. ಯುವ ಬ್ರಿಗೇಡ್ನ ಮಾನವೀಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಕೇನ್ಯ ಗ್ರಾಮದ ಕಣ್ಣಲ್ ಎಂಬಲ್ಲಿ ಬಡ ವ್ಯಕ್ತಿಗೆ ಸೂರು ನಿರ್ಮಿಸಿ ಕೊಡುವ ಮೂಲಕ ಕಡಬದ ಯುವ ಬ್ರಿಗೇಡ್ ಆದರ್ಶದೊಂದಿಗೆ ಮಾನವೀಯತೆ ಮೆರೆದಿದೆ. ಕೇನ್ಯ ಗ್ರಾಮದ ಕಣ್ಕಲ್ ನಿವಾಸಿ ಲಿಂಗು ಅವರಿಗೆ ಯುವ ಬ್ರಿಗೇಡ್ ದಾನಿಗಳ ಸಹಕಾರದಿಂದ ನಿರ್ಮಿಸಿಕೊಟ್ಟ ನೂತನ ನಿವಾಸವನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಸ್ತಾಂತರಿಸಿದ್ದಾರೆ.
ಅಂಧ ವ್ಯಕ್ತಿಗೆ ಮನೆ ನಿರ್ಮಿಸಿಕೊಟ್ಟು ಆಪತ್ಬಾಂದವರಾದ ಯುವ ಬ್ರಿಗೇಡ್ ಕಾರ್ಯಕರ್ತರು ಕಣ್ಕಲ್ ನಿವಾಸಿ ಲಿಂಗು ಜನ್ಮತಃ ಅಂಧರಾಗಿದ್ದು, ಸ್ವಾವಲಂಬಿಯಾಗಿ ಒಬ್ಬರೇ ಜೀವನ ಸಾಗಿಸುತ್ತಿದ್ದರು. ಸುಮಾರು 50 ವರ್ಷದ ಇವರು ಅವಿವಾಹಿತರಾಗಿದ್ದು, ಅಡಿಕೆ ಸುಲಿಯುವ ಕಾಯಕ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನದಿಯಿಂದ ನೀರು ತಂದು ಸ್ವಂತ ಅಡುಗೆ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಸಂಬಂಧಿ ಲಲಿತಾ ಅವರು ಕಳೆದ ನಾಲ್ಕು ವರ್ಷದ ಹಿಂದೆ ನಿರ್ಮಿಸಿಕೊಟ್ಟ ಟಾರ್ಪಾಲಿನ ಜೋಪಡಿಯಲ್ಲಿ ಒಬ್ಬನೇ ಜೀವನ ಸಾಗಿಸುತ್ತಿದ್ದು, ಸಹೋದರನ ಪುತ್ರ ಆಪತ್ಕಾಲದಲ್ಲಿ ಸಹಕಾರ ನೀಡುತ್ತಿದ್ದಾರೆ.
ಕಷ್ಟದಿಂದ ಜೀವನ ಸಾಗಿಸುವ ಅವರ ಬಳಿ ಪಡಿತರ ಚೀಟಿಯೂ ಇಲ್ಲ. ಅಲ್ಲದೆ ಸರ್ಕಾರದ ಯಾವುದೇ ಸವಲತ್ತುಗಳೂ ಇವರಿಗೆ ದೊರಕಿಲ್ಲ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಲ್ಪ ಮಟ್ಟಿಗೆ ಸಹಕಾರ ದೊರಕಿದೆ.
ಇದೀಗ ಯುವ ಬ್ರಿಗೇಡ್ ನೂತನವಾಗಿ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ. ಯುವ ಬ್ರಿಗೇಡ್ ವಿಭಾಗ ಸಂಚಾಲಕ ತಿಲಕ್ ಶಿಶಿಲ ಅವರ ನೇತೃತ್ವದಲ್ಲಿ ಯುವ ಬ್ರಿಗೇಡ್ ಸದಸ್ಯರು ಸಹಾಯ ಹಸ್ತ ಚಾಚಿದ್ದಾರೆ.