ಮಂಗಳೂರು: ಈ ಬಾರಿಯ ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಅಂತಿಮ ತೆರೆ ಎಳೆಯುವ ಕಾಲ ಸನ್ನಿಹಿತವಾಗಿದೆ. ಇಂದಿಗೆ ಎಲ್ಲಾ ಯಕ್ಷಗಾನ ಮೇಳಗಳ ಕಲಾವಿದರು ತಮ್ಮ ಗೆಜ್ಜೆ ಬಿಚ್ಚಲಿದ್ದಾರೆ. ಈ ಮೂಲಕ ಸುಮಾರು ಆರು ತಿಂಗಳ ಯಕ್ಷಗಾನ ಮೇಳಗಳ ತಿರುಗಾಟ ಸ್ತಬ್ಧವಾಗಲಿದೆ. ಕಾಸರಗೋಡಿನಿಂದ ಉತ್ತರ ಕರ್ನಾಟಕದವರೆಗೆ ತೆಂಕು - ಬಡಗು - ಬಡಾಬಡಗು ಎಂದು ಸುಮಾರು 50ರಿಂದ 60ರಷ್ಟು ಯಕ್ಷಗಾನ ಮೇಳಗಳು ತಿರುಗಾಟವನ್ನು ನಡೆಸುತ್ತಿರುತ್ತವೆ. ಸಾಮಾನ್ಯವಾಗಿ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ನಡೆಸಲಾಗುತ್ತದೆ.
ಆದರೆ, ಈ ಬಾರಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಹುತೇಕ ಮೇಳಗಳು ಕಾಲಮಿತಿ ಪ್ರದರ್ಶನವನ್ನೇ ಮಾಡಿವೆ. ಕೆಲವು ಕಡೆಗಳಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದರೂ, ಕಾಲಮಿತಿಯ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಳವಾಗಿರುವುದು ಯಕ್ಷಗಾನದ ಉಳಿವಿನ ದೃಷ್ಟಿಯಿಂದ ಸಂತಸಪಡುವ ವಿಚಾರವಾಗಿದೆ.
ಈಗಾಗಲೇ ತೆಂಕಿನ ಪ್ರಸಿದ್ಧ ಮೇಳಗಳಾದ ಕಟೀಲು, ಗೆಜ್ಜೆಗಿರಿ, ಹನುಮಗಿರಿ, ಬಪ್ಪನಾಡು, ಸುಂಕದಕಟ್ಟೆ, ಪಾವಂಜೆ, ಸಸಿಹಿತ್ಲು, ಬೆಂಕಿನಾಥೇಶ್ವರ ಮೇಳಗಳು, ಬಡಗಿನ ಪ್ರಸಿದ್ಧ ಟೆಂಟ್ ಮೇಳಗಳಾದ ಸಾಲಿಗ್ರಾಮ, ಪೆರ್ಡೂರು ಮೇಳಗಳು ಧರ್ಮಸ್ಥಳ ಮೇಳವು ತಿರುಗಾಟ ನಿಲ್ಲಿಸಿದೆ. ಒಟ್ಟಿನಲ್ಲಿ ಎಲ್ಲಾ ಮೇಳಗಳು ತಮ್ಮ ತಿರುಗಾಟಕ್ಕೆ ತೆರೆ ಎಳೆಯುತ್ತದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕಟೀಲಿನ ಆರೂ ಮೇಳಗಳು, ಪಾವಂಜೆ ಸೇರಿದಂತೆ ಇತರ ಮೇಳಗಳಲ್ಲಿ ಶ್ರೀ ದೇವಿ ಮಹಾತ್ಮೆ ಪ್ರಸಂಗ ಅಧಿಕ ಸಂಖ್ಯೆಯಲ್ಲಿ ಪ್ರದರ್ಶನಗೊಂಡಿತು. ಉಳಿದಂತೆ ಕಲ್ಯಾಣ ಪ್ರಸಂಗಗಳು, ರಾಮಾಯಣ, ಮಹಾಭಾರತ, ಭಾಗವತ ಆಧಾರಿತ ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಂಡಿದ್ದವು. ತುಳು ಪ್ರಸಂಗಗಳನ್ನು ಆಡುವ ಮೇಳಗಳ ಎಂದಿನಂತೆ ತಮ್ಮ ನೂತನ ಪ್ರಸಂಗದೊಂದಿಗೆ ಇನ್ನಿತರ ತುಳು ಪ್ರಸಂಗವನ್ನು ಪ್ರದರ್ಶಿಸಿದವು.