ಮಂಗಳೂರು: ಚಂದ್ರಗಿರಿಯ ತೀರದಲ್ಲಿ ಎಂಬ ಪ್ರಸಿದ್ದ ಕಾದಂಬರಿ ಬರೆದ ಹಿರಿಯ ಸಾಹಿತಿ ಡಾ ಸಾರಾ ಅಬೂಬಕ್ಕರ್ ಇಂದು ನಿಧನರಾದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನರಾದರು. ಅವರು ನಾಲ್ವರು ಪುತ್ರ ರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೂಲತ ಕೇರಳ ರಾಜ್ಯದ ಕಾಸರಗೋಡಿನ ಚಂದ್ರಗಿರಿ ತೀರದ ಸಾರಾ ಅವರು ಮದುವೆಯಾದ ಬಳಿಕ ನಗರದ ಹ್ಯಾಟ್ ಹಿಲ್ನಲ್ಲಿ ವಾಸವಾಗಿದ್ದರು. ಅವರ ಚಂದ್ರಗಿರಿ ತೀರದಲ್ಲಿ ಕಾದಂಬರಿ ಪ್ರಸಿದ್ದಿ ಪಡೆದಿತ್ತು. ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ರಾತ್ರಿ 8 ಗಂಟೆಗೆ ನಗರದ ಬಂದರ್ ನ ಝೀನತ್ ಬಕ್ಷ್ ಮಸೀದಿ ಆವರಣದಲ್ಲಿ ನಡೆಯಲಿದೆ.
ಕನ್ನಡದ ಪ್ರಖ್ಯಾತ ಲೇಖಕಿಯಾಗಿರುವ ಸಾರಾ ಅಬೂಬಕ್ಕರ್ ಅವರು 1936 ಜೂನ್ 30 ರಂದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮವೊಂದರಲ್ಲಿ ಜನಿಸಿದ್ದರು. ಇವರ ತಂದೆ ನ್ಯಾಯವಾದಿ ಪಿ ಅಹಮದ್ ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರಿನಲ್ಲಿ, ಹೈಸ್ಕೂಲ್ ಕಾಸರಗೋಡಿನಲ್ಲಿ ನಡೆಯಿತು. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕು ಎಂಬ ಆಶಯ ಅವರಿಗೆ ಬಾಲ್ಯದಲ್ಲೇ ಮೂಡಿ ಬಂದಿತ್ತು. ಇಂಜಿನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹವಾಗಿತ್ತು.
ನಿರಂತರ ಓದು ಅವರ ಆಸಕ್ತಿಯ ಕ್ಷೇತ್ರ:ಬಳಿಕ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು. ಆದರೆ, ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರುಹೋಗಿ ಸದಾ ಓದಿನಲ್ಲಿ ಮಗ್ನರಾಗುತ್ತಿದ್ದರು. ಮನೋ ವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಹೆಚ್ಚಿನ ಆಕರ್ಷಣೆ ಮೂಡಿಸಿದ್ದವು. ಸಂಕಷ್ಟದಲ್ಲಿದ್ದ ಸಹ ಧರ್ಮೀಯರ ಕುರಿತು ಅವರ ಮನ ನಿರಂತರವಾಗಿ ಮಿಡಿಯುತ್ತಿತ್ತು.
ಇವರ ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಿಗೂ ಬರೆಯುವ ಆಸಕ್ತಿ ಮೂಡಿತ್ತು. ಸಾರಾ ಅಬೂಬಕ್ಕರ್ ಅವರು ಸುಮಾರು 40 ವರ್ಷಗಳ ಪ್ರಾಯದಲ್ಲಿ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು 1984 ರಲ್ಲಿ ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’. ಈ ಧಾರಾವಾಹಿ ಲಂಕೇಶ್ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು.