ಕರ್ನಾಟಕ

karnataka

ETV Bharat / state

ಕುಮಾರಪರ್ವತದ ಅಕ್ಷಯ ಪಾತ್ರೆ: ಗಿರಿಗದ್ದೆ ಭಟ್ಟರ ಮನೆ ಗೋಡೆ ಮೇಲೆ ಮೂಡಿದ ವರ್ಲಿ ಚಿತ್ರಾಲಂಕಾರ - worli painting on the wall of girigadde bhat house

ಚಾರಣಿಗರಿಗೆ ಊಟ ಉಪಹಾರ ನೀಡುವ ಅಕ್ಷಯ ಪಾತ್ರೆಯಾದ ಗಿರಿಗದ್ದೆಯ ಭಟ್ಟರ ಮನೆಗೆ ನಮ್ಮ ಕುಡ್ಲ ಚಾರಣಿಗರ ಸಂಘದ ಉತ್ಸಾಹಿ ಯುವ ಸದಸ್ಯರು ವರ್ಲಿ ಅಲಂಕಾರ ಬಿಡಿಸುವ ಮೂಲಕ ಮಾದರಿಯಾಗಿದ್ದಾರೆ. ಇದರಿಂದ ಮನೆಯ ಸೌಂದರ್ಯ ಅಧಿಕವಾಗುವುದರೊಂದಿಗೆ ಚಾರಣಿಗರಿಗೆ ಜಾಗೃತಿಯ ಸಂದೇಶ ತಲುಪಿಸಿದಂತಾಗಿದೆ.

worli painting on the wall of girigadde bhat house
ಗಿರಿಗದ್ದೆ ಭಟ್ಟರ ಮನೆ ಗೋಡೆ ಮೇಲೆ ಮೂಡಿದ ವರ್ಲಿ ಚಿತ್ರಾಲಂಕಾರ

By

Published : Oct 22, 2022, 12:22 PM IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತವು ಚಾರಣಿಗರ ಸ್ವರ್ಗ. ಇಲ್ಲಿನ ಗಿರಿಗದ್ದೆಯಲ್ಲಿರುವ ಭಟ್ಟರ ಮನೆಯು ಚಾರಣಿಗರಿಗೆ ಊಟ ಉಪಹಾರ ನೀಡುವ ಅಕ್ಷಯ ಪಾತ್ರೆಯಾಗಿದೆ. ಅಕ್ಷಯ ಪಾತ್ರೆಯಾಗಿರುವ ಭಟ್ಟರ ಮನೆಯ ಗೋಡೆಗೆ ನಮ್ಮ ಕುಡ್ಲ ಚಾರಣಿಗರ ಸಂಘದ ಉತ್ಸಾಹಿ ಯುವ ಸದಸ್ಯರು ವರ್ಲಿ ಅಲಂಕಾರ ಬಿಡಿಸುವ ಮೂಲಕ ಮಾದರಿ ಆಗುವುದರೊಂದಿಗೆ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸುಬ್ರಹ್ಮಣ್ಯದಿಂದ ಸುಮಾರು 8 ಕಿ.ಮೀ ದೂರವಿರುವ ಗಿರಿಗದ್ದೆಯ ಮಹಾಲಿಂಗೇಶ್ವರ ಭಟ್​ರ ಮನೆಗೆ ವರ್ಲಿ ಚಿತ್ರಾಲಂಕಾರ ಬಿಡಿಸಲು ಸಲುವಾಗಿಯೇ ನಮ್ಮ ಕುಡ್ಲ ಚಾರಣ ಸಂಘದ ಸಂಸ್ಥಾಪಕ ಜಯರಾಮ ಪಂಬೆತ್ತಾಡಿ ನೇತೃತ್ವದಲ್ಲಿ ಸಂಘದ ಯುವ ಸದಸ್ಯರು ಬೆಟ್ಟ ಏರಿದರು. ಭಾರಿ ಮಳೆಯ ನಡುವೆ ಬೆಟ್ಟ ಏರಿ ಚಿತ್ರಾಲಂಕಾರ ಆರಂಭಿಸಿದರು. ಆಗಸ್ಟ್​ನಲ್ಲಿ ಚಿತ್ರಾಲಂಕಾರ ಆರಂಭಿಸಿದ ಇವರು, ಅಕ್ಟೋಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸಿದರು.

ಗಿರಿಗದ್ದೆ ಭಟ್ಟರ ಮನೆ ಗೋಡೆ ಮೇಲೆ ಮೂಡಿದ ವರ್ಲಿ ಚಿತ್ರಾಲಂಕಾರ

ಚಿತ್ರಕಲೆಗಾಗಿ ಇವರು ಪರಿಕರಗಳೊಂದಿಗೆ ಸುಮಾರು 4 ಬಾರಿ ಬೆಟ್ಟ ಏರಿ ಇಳಿದ್ದರು. ಎರಡು ತಿಂಗಳ ಕಾಲ ನಿರಂತರವಾಗಿ ಚಿತ್ತಾರವನ್ನ ಗೋಡೆ ಮೇಲೆ ಚಿತ್ರೀಕರಿಸಿದರು. ಇದೀಗ ಗೋಡೆಗಳು ಚಿತ್ರಾಲಂಕಾರದಿಂದ ಕಂಗೊಳಿಸುತ್ತಿದ್ದು, ಚಾರಣಿಗರನ್ನು ಚಿತ್ತಾಕರ್ಷಕವಾಗಿ ಸ್ವಾಗತಿಸುತ್ತಿದೆ.

ನಮ್ಮ ಕುಡ್ಲ ಚಾರಣ ಸಂಘದ ಪರಿಶ್ರಮ: ಚಾರಣಿಗರಿಗೆ ಉತ್ತೇಜನ ನೀಡುವುದರೊಂದಿಗೆ ಕಳೆದ ಮೂರು ವರ್ಷಗಳಿಂದ ಕುಮಾರಪರ್ವತದಲ್ಲಿ ಸುಮಾರು 600ಕ್ಕೂ ಅಧಿಕ ಮಾವಿನ ಗಿಡಗಳನ್ನು ನೆಟ್ಟು ವನ ಸಮೃದ್ಧಿಗೆ ತನ್ನದೇ ಕೊಡುಗೆಯನ್ನ ನಮ್ಮ ಕುಡ್ಲ ಚಾರಣ ಸಂಘ ನೀಡುತ್ತಿದೆ. ಅಲ್ಲದೇ ಕಳೆದ ಮೂರು ವರ್ಷಗಳಿಂದ ಕುಮಾರಪರ್ವತದಿಂದ ಸುಬ್ರಹ್ಮಣ್ಯದ ತನಕ ವರ್ಷದಲ್ಲಿ ಮೂರು ಬಾರಿ ಸ್ವಚ್ಛತಾ ಸೇವೆ ಮಾಡುತ್ತಿದೆ. ಸಂಘದ ಪರಿಶ್ರಮದಿಂದ ವಿನೂತನ ಪ್ರಯೋಗವಾಗಿ ಭಟ್​ ಅವರ ಮನೆಯ ಗೋಡೆಯು ಚಿತ್ರಾಲಂಕಾರದಿಂದ ಆಕರ್ಷಕಗೊಂಡಿತು.

ಇದನ್ನೂ ಓದಿ:ಮಲೆನಾಡಿನ ಹೆಂಗಳೆಯರಿಂದ ಹಸೆ ಚಿತ್ತಾರ: ಚಿತ್ತಾರಗಿತ್ತಿಯರಿಗೆ ಪ್ರಶಸ್ತಿ ಪ್ರದಾನ

ತ್ರಿವಳಿ ಕಲಾವಿದರ ಪರಿಶ್ರಮ: ನಮ್ಮ ಕುಡ್ಲ ಚಾರಣ ಸಂಘದ ಸಂಸ್ಥಾಪಕ ಜಯರಾಮ ಪಂಬೆತ್ತಾಡಿ ನೇತೃತ್ವದಲ್ಲಿ ಸಂಘದ ಸದಸ್ಯರು ಹಾಗೂ ಚಿತ್ರ ಕಲಾವಿದರಾದ ಉಮೇಶ್ ಎಂ.ವಿ ಪುತ್ತೂರು, ಮಿಥುನ್ ರೈ ಕಡಬ ಚಿತ್ರಕಲಾ ಚಿತ್ತಾರ ಬಿಡಿಸಿದರು. ಇವರಿಗೆ ಗಿರಿಗದ್ದೆ ಮಹಾಲಿಂಗೇಶ್ವರ ಭಟ್ಟರು, ನಾರಾಯಣ ಭಟ್, ಅರಣ್ಯ ರಕ್ಷಕ ಸಜ್ಜನ್, ಅರಣ್ಯ ವೀಕ್ಷಕರಾದ ಮಿಲನ್, ವಂಶಿ, ಗುರುಕಾಂತ್, ಕಲಾವಿದ ರಾಮಚಂದ್ರ ದೇವರಗದ್ದೆ ಅವರು ಸಹಕಾರ ನೀಡಿದ್ದರು.

ಇದನ್ನೂ ಓದಿ:ಬಿಆರ್‌ಟಿ ಪ್ರವಾಸಿ ತಾಣಗಳಿಗೆ ಹೊಸ ಸ್ಪರ್ಶ: ಕಾಡಿನ‌ ಕಟ್ಟಡಗಳಲ್ಲಿ ಪ್ರಾಣಿ‌ಗಳ ಚಿತ್ತಾರ

ಗೋಡೆಯ ಮೇಲೆ ಕುಮಾರಪರ್ವತ ಸೌಂದರ್ಯ: ಆರಂಭದಲ್ಲಿ ಮನೆಯ ಗೋಡೆಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಲಾಯಿತು. ಬಳಿಕ ಅದಕ್ಕೆ ಬಣ್ಣ ಬಳಿಯಲಾಯಿತು. ನಂತರ ವರ್ಲಿ ಚಿತ್ರಾಲಂಕಾರ ಬಿಡಿಸಿದರು. ಮನೆಯ ಗೋಡೆಯ ಮೇಲೆ ಕುಮಾರಪರ್ವತದ ವಿಹಂಗಮ ನೋಟ, ಕುಮಾರಪರ್ವತದ ವನರಾಶಿಯ ಸ್ನಿಗ್ಧ ಸೌಂದರ್ಯ, ಕುಕ್ಕೆ ಜಾತ್ರೆಯ ಸೊಬಗು, ಕುಕ್ಕೆಯ ಗೋಪುರವನ್ನು ಚಿತ್ತಾಕರ್ಷಕ ವಾಗಿ ಮೂಡಿಸಿದರು. ಅಲ್ಲದೇ, ಚಿತ್ರದ ಮೂಲಕ ಪರಿಸರ ಜಾಗೃತಿ, ಪರಿಸರ ಸ್ವಚ್ಛತೆ ಮತ್ತು ಚಾರಣ ತಾಣದ ಸ್ಚಚ್ಛತೆಯ ಅಗತ್ಯತೆಯನ್ನು ತಿಳಿಸಲಾಗಿದೆ‌. ಈ ಮೂಲಕ ಮನೆಯ ಸೌಂದರ್ಯ ಅಧಿಕವಾಗುವುದರೊಂದಿಗೆ ಚಾರಣಿಗರಿಗೆ ಜಾಗೃತಿಯ ಸಂದೇಶ ತಲುಪಿಸಿದಂತಾಗಿದೆ.

ಇದನ್ನೂ ಓದಿ:ಸರ್ಕಾರಿ ಕಚೇರಿಗಳ ಕಾಂಪೌಂಡ್​ ಮೇಲೆ ಅರಳಿದ ಕಲಾಕೃತಿಗಳು.. ಸುಂದರ ನಗರೀಕರಣಕ್ಕೆ ಉತ್ತೇಜನ

ABOUT THE AUTHOR

...view details