ಕ್ಯಾನ್ಸರ್ ಪೀಡಿತರಿಗೆ ಉದ್ದವಾದ ಕೇಶರಾಶಿ ದಾನ ಮಾಡಿದ ಯುವತಿ - cancer patients
ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಮಂಗಳೂರು ಮೂಲದ ರೇಷ್ಮಾ ಎಂಬುವರು ತಮ್ಮ 24 ಇಂಚು ತಲೆ ಕೂದಲನ್ನೇ ದಾನ ಮಾಡಿದ್ದಾರೆ. ಈ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಪರೋಕ್ಷವಾಗಿ ನೆರವು ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
![ಕ್ಯಾನ್ಸರ್ ಪೀಡಿತರಿಗೆ ಉದ್ದವಾದ ಕೇಶರಾಶಿ ದಾನ ಮಾಡಿದ ಯುವತಿ women donate her hair for cancer patient's wig](https://etvbharatimages.akamaized.net/etvbharat/prod-images/768-512-8557114-644-8557114-1598375781602.jpg)
ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಯುವತಿ
ಮಂಗಳೂರು:ನೀಳ ಕೇಶರಾಶಿ ಅಂದರೆ ಯಾರಿಗೆ ತಾನೇ ಇಷ್ಟ ಇರೊಲ್ಲ. ಅದೇ ರೀತಿ ಕೇಶರಾಶಿಯನ್ನು ಶೃಂಗಾರ ಮಾಡಲು ಬ್ಯೂಟಿಪಾರ್ಲರ್ನಲ್ಲಿ ವಿವಿಧ ವಿನ್ಯಾಸದಲ್ಲಿ ಕತ್ತರಿಸುವವರೂ ಸಾಕಷ್ಟು ಮಂದಿ ಇದ್ದಾರೆ. ಇಲ್ಲೊಬ್ಬರು ಯುವತಿಯೂ ತಮ್ಮ ನೀಳಕೇಶವನ್ನು 24 ಇಂಚು ಕತ್ತರಿಸಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ, ಇವರು ಕೂದಲು ಕತ್ತರಿಸಿದ್ದು ಫ್ಯಾಷನ್ಗಾಗಿ ಅಲ್ಲ. ಬದಲಾಗಿ ಕ್ಯಾನ್ಸರ್ ಪೀಡಿತರಿಗಾಗಿ ತಮ್ಮ ಕೂದಲು ದಾನ ಮಾಡಲು.
ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಯುವತಿ
ಇದಕ್ಕಾಗಿ ಸಾಕಷ್ಟು ಕಡೆಗಳಲ್ಲಿ ವಿಚಾರಿಸಿದ್ದಾರೆ. ಆದರೆ ಕ್ಯಾನ್ಸರ್ ಪೀಡಿತರಿಗೆ ವಿಗ್ ಮಾಡಲೆಂದು ಕೂದಲು ದಾನ ಪಡೆಯುವ ಟ್ರಸ್ಟ್ ಅಥವಾ ಆಸ್ಪತ್ರೆಗಳ ಮಾಹಿತಿ ಎಲ್ಲೂ ಅವರಿಗೆ ಲಭ್ಯವಾಗಿಲ್ಲ. ಬಳಿಕ ಅವರ ಪತಿ ರಾಮದಾಸ್ ಅವರು ಗೂಗಲ್ನಲ್ಲಿ ಹುಡುಕಿ, ತ್ರಿಶ್ಶೂರ್ ಹೇರ್ ಬ್ಯಾಂಕ್ ಅನ್ನು ಪತ್ತೆ ಹಚ್ಚಿದ್ದಾರಂತೆ. ನಿಯಮ ಪ್ರಕಾರ ಕನಿಷ್ಠ 8 ಇಂಚು ಕೂದಲು ದಾನ ಮಾಡಬೇಕು. ಆದರೆ ರೇಷ್ಮಾ ರಾಮದಾಸ್ ಅವರು 24 ಇಂಚು ಕೂದಲನ್ನು ದಾನ ಮಾಡಿದ್ದಾರೆ.
ಕೂದಲು ದಾನದ ಬಗ್ಗೆ ರೇಷ್ಮಾ ರಾಮದಾಸ್ ಅವರು ಮಾತನಾಡಿ, ಬಡ ಕ್ಯಾನ್ಸರ್ ಪೀಡಿತರಿಗಾಗಿ ನಾನು ನನ್ನ ಕೂದಲನ್ನು ಕೇರಳದ ತ್ರಿಶ್ಶೂರ್ನ ಹೇರ್ ಬ್ಯಾಂಕ್ಗೆ ದಾನ ಮಾಡಿದ್ದೇನೆ. ಕೊರೊನಾ ಕಾರಣದಿಂದ ನಾವು ನೇರವಾಗಿ ಹೋಗಿ ಹೇರ್ ಬ್ಯಾಂಕ್ ಗೆ ಕೂದಲು ನೀಡಲಾಗಲಿಲ್ಲ. ಆದರೆ ಈಗಾಗಲೇ ನಾವು ಅದನ್ನು ಕೊರಿಯರ್ ಮೂಲಕ ಹೇರ್ ಬ್ಯಾಂಕ್ಗೆ ಕಳುಹಿಸಿದ್ದೇವೆ. ಮೊದಲಿಗೆ ಕೇವಲ ಈ ಕಾರ್ಯಕ್ಕೆ ಪತಿಯ ಸಹಕಾರ ಮಾತ್ರ ಇದ್ದು, ಮನೆಯವರು ವಿರೋಧಿಸಿದ್ದರು. ಆದರೆ ಎಲ್ಲರಿಗೂ ತಿಳಿಹೇಳಿದ ಬಳಿಕ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
Last Updated : Aug 26, 2020, 12:41 AM IST