ಮಂಗಳೂರು: ಮಹಿಳೆಯೋರ್ವರು ಕೋವಿಡ್ ನೆಗೆಟಿವ್ ವರದಿ ನೀಡಿದ್ದರೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಿಂದ ದುಬೈ ಪ್ರಯಾಣಕ್ಕೆ ಅವಕಾಶ ನಿರಾಕರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇದರಿಂದ ಅವರು ಮತ್ತೆ ಕೋವಿಡ್ ತಪಾಸಣೆಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ನಿವಾಸಿ ಚಾಂದ್ ಬೇಗಂ(47) ಎಂಬವರು ದುಬೈಗೆ ತೆರಳಲಿದ್ದು, ಹಾಗಾಗಿ ಕೋವಿಡ್ ತಪಾಸಣೆಯನ್ನು ಶಿವಮೊಗ್ಗದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ನಡೆಸಿದ್ದರು. ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಅವರು, ನ. 20ರಂದು ರಾತ್ರಿ 11.30ಕ್ಕೆ ದುಬೈಗೆ ತೆರಳಲೆಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸ್ಪೈಸ್ ಜೆಟ್ ವಿಮಾನ ಮೂಲಕ ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ ತಪಾಸಣಾ ವರದಿಯಲ್ಲಿ ಆಸ್ಪತ್ರೆಯ ಮೊಹರು, ಸಹಿ ಇದ್ದರೂ ಶಿವಮೊಗ್ಗ ಮತ್ತು ಶಿಮೊಗ್ಗ ಎಂಬ ಪದದ ದೋಷದಿಂದ ವರದಿ ಅಧಿಕೃತ ಅಲ್ಲ ಎಂದು ಮಹಿಳೆಗೆ ದುಬೈ ಪ್ರಯಾಣಕ್ಕೆ ನಿರಾಕರಿಸಲಾಗಿದೆ.