ಬಂಟ್ವಾಳ(ದ.ಕ):ಸಜೀಪಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಮಹಿಳೆ ಗೋಪಿ ಪೂಜಾರಿ(49) ಎಂಬುವರ ಮೃತದೇಹ ಸೋಮವಾರ ತುಂಬೆ ಸಮೀಪದಲ್ಲಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಪಾಣೆಮಂಗಳೂರು ನೂತನ ಸೇತುವೆ ಬಳಿಯಿಂದ ಶನಿವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದರು. ಅಂದೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳೀಯ ಮುಳುಗು ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿ ಮಹಿಳೆಗಾಗಿ ಭಾನುವಾರ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಸೋಮವಾರ ಅವರ ಶವ ಸಿಕ್ಕಿದೆ.
ಕೆಲವು ದಿನಗಳ ಹಿಂದೆ ಬಿ.ಸಿ.ರೋಡಿನ ಚಿಕ್ಕಯ್ಯಮಠದಲ್ಲಿರುವ ಅಕ್ಕನ ಮನೆಗೆ ಬಂದಿದ್ದ ಮಹಿಳೆ ಜು. 11ರಂದು ಮುಂಜಾನೆ ನಾಪತ್ತೆಯಾಗಿದ್ದರು. ಬಳಿಕ ಪಾಣೆಮಂಗಳೂರು ಸೇತುವೆಯ ಸಮೀಪದ ಮಹಿಳೆಯ ಶಾಲು ಹಾಗೂ ಬಳೆ ಪತ್ತೆಯಾದ ಹಿನ್ನೆಲೆಯಲ್ಲಿ ನದಿಗೆ ಹಾರಿದ್ದಾರೆ ಎಂದು ಹುಡುಕಾಟ ನಡೆಸಲಾಗಿತ್ತು. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಮಂಗಳೂರು ಜಪ್ಪಿನಮೊಗರು ಬಳಿರುವ ನೇತ್ರಾವತಿ ಸೇತುವೆ ಡೆತ್ ಸ್ಪಾಟ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಇದೀಗ ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಕೂಡ ಡೆತ್ ಸ್ಪಾಟ್ ಆಗಿ ಗುರುತಿಸಲ್ಪಟ್ಟಿದೆ.
ಜಪ್ಪಿನಮೊಗರಿನಲ್ಲೂ ನೇತ್ರಾವತಿ ನದಿಗೆ ಹಳೆ ಮತ್ತು ಹೊಸ ಸೇತುವೆಯಿದ್ದು, ಪಾಣೆಮಂಗಳೂರಿನಲ್ಲೂ ನೇತ್ರಾವತಿ ನದಿಗೆ ಬ್ರಿಟಿಷರ ಕಾಲದ ಹಳೇ ಮತ್ತು ಇನ್ನೊಂದು ಬದಿಯಲ್ಲಿ ಹೊಸ ಸೇತುವೆಯಿದೆ. ಇಲ್ಲೂ ಕೂಡ ಎರಡು ಸೇತುವೆಯಿಂದಲೂ ನೇತ್ರಾವತಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಕಳೆದ ಜನವರಿ ತಿಂಗಳಿನಿಂದೀಚೆಗೆ ಪಾಣೆಮಂಗಳೂರಿನ ಹೊಸ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಎರಡ್ಮೂರು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಮಡಿಕೇರಿಯ ಕುಟುಂಬವೊಂದು ಕಾರಿನಲ್ಲಿ ಅಗಮಿಸಿ ಪಾಣೆಮಂಗಳೂರು ನೇತ್ರಾವತಿ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿತ್ತು. ಈ ಸಂದರ್ಭ ಅವರ ಸಾಕು ನಾಯಿ ಬಚಾವಾಗಿತ್ತು. ಇದೀಗ ಪಾಣೆಮಂಗಳೂರು ಸೇತುವೆ ಕೂಡ ಡೆತ್ ಸ್ಪಾಟ್ ಆಗಿ ಪರಿಣಮಿಸಿದ್ದು, ಇಲ್ಲಿ ಕೂಡ ತಡೆ ಬೇಲಿ ನಿರ್ಮಿಸಬೇಕೆಂಬ ಕೂಗು ಸ್ಥಳೀಯರಿಂದ ಕೇಳಿ ಬಂದಿದೆ.