ಉಳ್ಳಾಲ: ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಕಾರ್ಯಕರ್ತ ಅಸ್ಗರ್ ಮುಡಿಪು ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಠಾಣೆಗೆ ಆಗಮಿಸಿ ಇನ್ನು ಮುಂದೆ ಇಂತಹ ಕೃತ್ಯ ಎಸಗುವುದಿಲ್ಲ. ಕಾಮಗಾರಿಗೆ ಅಡ್ಡಿಪಡಿಸುವುದಿಲ್ಲ. ಹಾಗೇ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳನ್ನು ಬಳಸುವುದಿಲ್ಲವೆಂದು ಮುಚ್ಚಳಿಕೆ ಬರೆದ ಕಾರಣ ಕೇಸ್ ವಾಪಸ್ ಪಡೆಯಲಾಗಿದೆ.
ಮುಚ್ಚಳಿಕೆ ಬರೆದು ಕ್ಷಮೆಯಾಚನೆ: ಬಿಜೆಪಿ ಕಾರ್ಯಕರ್ತನ ವಿರುದ್ಧದ ದೂರು ವಾಪಸ್ ಪಡೆದ ಮಹಿಳಾ ಅಧಿಕಾರಿ
ಬಿಜೆಪಿ ಕಾರ್ಯಕರ್ತ ಅಸ್ಗರ್ ಮುಡಿಪು ಎಂಬುವರು ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಈ ಬಗ್ಗೆ ಮಹಿಳಾ ಅಧಿಕಾರಿ ಠಾಣೆಗೆ ಭೇಟಿ ನೀಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ದೂರು ದಾಖಲಿಸಿದ್ದರು.
ನಗರದ ಮುಡಿಪು ಕಾಯರ್ ಗೋಳಿಯಿಂದ ಇನ್ಫೋಸಿಸ್ವರೆಗೆ ಪೈಪ್ಲೈನ್ ಕಾಮಗಾರಿಯ ಸ್ಥಳಕ್ಕೆ ಆಗಮಿಸಿದ ಅಸ್ಗರ್ ಮುಡಿಪು ಎಂಬುವರು ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಈ ಬಗ್ಗೆ ಮಹಿಳಾ ಅಧಿಕಾರಿ ಠಾಣೆಗೆ ಭೇಟಿ ನೀಡಿ ಅಸ್ಗರ್ ಮುಡಿಪು ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದೂರು ದಾಖಲಿಸಿದ್ದರು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಕೊಣಾಜೆ ಠಾಣಾಧಿಕಾರಿಗಳು ಅಸ್ಗರ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಇನ್ನು ಮುಂದೆ ಇಂತಹ ಕೃತ್ಯ ಎಸಗುವುದಿಲ್ಲ ಅಥವಾ ಕಾಮಗಾರಿ ನಡೆಯುವ ಪ್ರದೇಶಕ್ಕೆ ತೆರಳಿ ಕಾಮಗಾರಿಗೆ ಅಡ್ಡಿಪಡಿಸುವುದಿಲ್ಲ. ಮಹಿಳಾ ಅಧಿಕಾರಿಗಳಿಗೆ ಅಥವಾ ಅಲ್ಲಿನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟು, ಕ್ಷಮೆ ಕೇಳಿದ್ದಾರೆ. ಬಳಿಕ ಮಹಿಳಾ ಅಧಿಕಾರಿ ಕೇಸನ್ನು ವಾಪಸ್ ಪಡೆದಿದ್ದು, ಅಸ್ಗರ್ ಠಾಣೆಯಿಂದ ಬಿಡುಗಡೆಯಾಗಿದ್ದಾರೆ.