ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಬಳಿ ರಾತ್ರಿ ವೇಳೆ ಕೃಷಿ ತೋಟಗಳಿಗೆ ನುಗ್ಗುತ್ತಿದ್ದ ಒಂಟಿ ಸಲಗ ಜನರ ನಿದ್ದೆಗೆಡಿಸಿತ್ತು. ಆದರೆ ಇದೀಗ ನಾಲ್ಕು ಕಾಡಾನೆಗಳ ಗುಂಪೊಂದು ಕೃಷಿ ಪ್ರದೇಶಗಳಿಗೆ ನುಗ್ಗಿ ಭತ್ತ, ಬಾಳೆ, ತೆಂಗಿನ ಗಿಡಗಳನ್ನು ತುಳಿದು ನಾಶ ಮಾಡುತ್ತಿದೆ.
ಕಾಡಾನೆಗಳ ಹಾವಳಿ ತಪ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೆಲ್ಯಾಡಿಯ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿಯಶಾಂತಿ, ಮಣ್ಣಗುಂಡಿ ಪರಿಸರದಲ್ಲಿ ಹಲವು ದಿನಗಳಿಂದ ಒಂಟಿ ಕಾಡಾನೆಯೊಂದು ಓಡಾಡುತ್ತಿದ್ದು, ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿತ್ತು. ಆದರೆ ಇದೀಗ ಎರಡು ದಿನಗಳಿಂದ ನಾಲ್ಕು ಕಾಡಾನೆಗಳ ಹಿಂಡು ಈ ಪ್ರದೇಶದಲ್ಲಿ ಕೃಷಿಕರ ನಿದ್ದೆಗೆಡಿಸಿದ್ದು, ಜನರು ಭಯದಲ್ಲೇ ದಿನ ದೂಡುವಂತಾಗಿದೆ.
ರಾತ್ರಿ ವೇಳೆ ತೋಟಗಳಿಗೆ ನುಗ್ಗುವ ಆನೆಗಳ ಹಿಂಡು ಭತ್ತದ ಗದ್ದೆ, ಬಾಳೆ, ತೆಂಗಿನ ಗಿಡಗಳನ್ನು ತುಳಿದು ಸಂಪೂರ್ಣವಾಗಿ ನಾಶಮಾಡುತ್ತಿದೆ. ಈ ನಾಲ್ಕು ಆನೆಗಳ ಹಿಂಡು ಪೆರಿಯಶಾಂತಿ ಸಮೀಪದ ಮಣ್ಣಗುಂಡಿಯ ಸೇಸಪ್ಪ, ತೋಮಸ್, ಹಮೀದ್, ಇಬ್ರಾಹಿಂ, ನಾರಾಯಣ ಎಂಬುವವರ ತೋಟಗಳಿಗೆ ಮತ್ತು ದೇವದಾಸ್, ಹೊನ್ನಪ್ಪ ಎಂಬವರ ಗದ್ದೆಗೆ ನುಗ್ಗಿ ಸಂಪೂರ್ಣ ಬೆಳೆ ನಾಶ ಮಾಡಿದೆ. ಕಾಡಾನೆಗಳ ಈ ರಾಜಾರೋಷ ಸಂಚಾರ ಹಾಗೂ ಬೆಳೆ ನಾಶಗೊಳಿಸುವಿಕೆಯಿಂದಾಗಿ ಇದೀಗ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ಸ್ಥಳೀಯರು ಈ ಬಗ್ಗೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡುವ ಮೂಲಕ ಗಮನಕ್ಕೆ ತರಲಾಗಿದೆ. ಆದರೆ ಈತನಕ ಕಾಡಾನೆಗಳಿಂದಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.