ಕಡಬದಲ್ಲಿ ನರಹಂತಕ ಕಾಡಾನೆ ಸೆರೆ... ಕಡಬ(ದಕ್ಷಿಣ ಕನ್ನಡ): ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಗಳಲ್ಲಿ ಗಂಡು ಕಾಡಾನೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಕಳೆದ ಎರಡು ದಿನಗಳಲ್ಲಿ ವಿಫಲವಾದ ಕಾರ್ಯಾಚರಣೆ ಕೊನೆಗೂ ಮೂರನೇಯ ದಿನ ಯಶಸ್ಸು ಕಂಡಿದೆ.
ಕಳೆದ ಫೆ.20 ಬೆಳಗ್ಗೆ ಕಾಡಾನೆಯ ದಾಳಿಯಲ್ಲಿ ರೆಂಜಿಲಾಡಿಯ ನೈಲ ನಿವಾಸಿಗಳಾದ ರಂಜಿತಾ ರೈ (21) ಮತ್ತು ಅವರ ರಕ್ಷಣೆಗೆ ಧಾವಿಸಿದ ರಮೇಶ್ ರೈ (52)ಎಂಬವರನ್ನು ಕಾಡಾನೆ ದಾಳಿ ಮಾಡಿ ಕೊಂದಿತ್ತು. ಇವರಿಬ್ಬರ ಮೃತದೇಹ ತೆಗೆಯುವ ಮುಂಚೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಡಿಎಫ್ಒ ಸ್ಥಳಕ್ಕೆ ಬರುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಇವರು ಸ್ಥಳಕ್ಕೆ ಬಂದಾಗ ಕಾಡಾನೆಯನ್ನು ಸೆರೆ ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದರು.
3 ದಿನಗಳ ಕಾರ್ಯಾಚರಣೆ: ಘಟನೆ ನಡೆದ ದಿನದಂದೇ ದುಬಾರೆ ಆನೆ ಕ್ಯಾಂಪ್‌ನಿಂದ ಮತ್ತು ಮತ್ತಿಗೋಡು ಎಂಬಲ್ಲಿಂದ ಅಭಿಮನ್ಯು ಆನೆ ಸೇರಿದಂತೆ ತರಬೇತಿ ಪಡೆದ 5 ಆನೆಗಳನ್ನು ತರಲಾಗಿತ್ತು. ಬಳಿಕ ಫೆ.21 ರಂದು ಡ್ರೋನ್ ಕ್ಯಾಮರಾ ಬಳಸಿ ಟೆಂಪರೇಚರ್ ಟೆಕ್ನಾಲಜಿ ಬಳಸಿ ಮತ್ತು ಆನೆ ಟ್ಯ್ರಾಕರ್ಸ್ ಮೂಲಕ ಕಾಡಾನೆ ಪತ್ತೆ ಕಾರ್ಯ ಆರಂಭವಾಗಿತ್ತು. ರೆಂಜಿಲಾಡಿಯ ತುಂಬೆ ರಕ್ಷಿತಾರಣ್ಯದಲ್ಲಿ ಬಂದಿಳಿದ ಸಾಕಾನೆಗಳು ಮತ್ತು ತಜ್ಞ ವೈದ್ಯರ ತಂಡ ನೂಜಿಬಾಳ್ತಿಲ ಸಮೀಪದ ಪುತ್ಯೆ ಎಂಬಲ್ಲಿಂದ ಕಾರ್ಯಾಚರಣೆ ಆರಂಭಿಸಿತು.
ಆದರೆ, ಅಂದಿನ ಪ್ರಯತ್ನ ಫಲ ನೀಡಲಿಲ್ಲ. ಮತ್ತೆ ಮರ್ಧಾಳ ಸಮೀಪದ ಅಜನ ಪ್ರದೇಶದಲ್ಲಿ ಕಾಡಾನೆ ಪತ್ತೆಯಾದವು. ಆದರೆ, ಅಲ್ಲೂ ಆನೆಗೆ ಅರಿವಳಿಕೆ ನೀಡುವ ಪ್ರಯತ್ನ ಸಫಲವಾಗಲಿಲ್ಲ. ಮತ್ತೆ ಮೂರನೇ ದಿನವಾದ ನಿನ್ನೆ ಸಂಜೆ ಸುಂಕದಕಟ್ಟೆ ಕೊಂಬಾರು ರಸ್ತೆಯ ಮಂಡೇಕರ ಭಾಗದಲ್ಲಿ ಕಾಡಾನೆ ಪತ್ತೆಯಾದವು.
ಅಭಿಮನ್ಯು ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ:ಸಂಜೆ ವೇಳೆಗೆ ಇಲ್ಲಿಯೂ ಪ್ರಯತ್ನ ವಿಫಲವಾಗುವ ಹಂತಕ್ಕೆ ತಲುಪಿತು. ಆದರೆ ಹಟ ಬಿಡದ ಡಿಎಫ್ಓ ದಿನೇಶ್ ಒಳಗೊಂಡ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಮತ್ತು ಡಾಕ್ಟರ್ ಮುಜೀಬ್ ಅವರ ತಂಡ ಹಾಗೂ ಆನೆ ಟ್ಯ್ರಾಕರ್ಸ್ ತಂಡಗಳು ಮುಖ್ಯ ರಸ್ತೆಯಿಂದ ಸುಮಾರು 5 ಕಿ.ಮೀ ಅಂತರದ ದಟ್ಟ ಅರಣ್ಯದ ಒಳಗಡೆ ಕಾಡಾನೆಯೊಂದನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ನೀಡಿ ಆನೆಯನ್ನು ಸೆರೆ ಹಿಡಿದರು.
ತಕ್ಷಣ ಕಾಡಾನೆ ಹಿಡಿಯಲು ನೈಪುಣ್ಯತೆ ಹೊಂದಿರುವ ಅಭಿಮನ್ಯು ಆನೆಯೊಂದಿಗೆ ಇತರ ನಾಲ್ಕು ಸಾಕಾನೆಗಳು ಸ್ಥಳಕ್ಕೆ ತೆರಳಿ ಕಾಡಾನೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ರಸ್ತೆ ಸಮೀಪಕ್ಕೆ ಎಳೆದುಕೊಂಡು ಬರಲಾಯಿತು. ಬಳಿಕ ಕ್ರೇನ್ ಸಹಾಯದಿಂದ ಕಾಡಾನೆಯನ್ನು ಲಾರಿ ಮೇಲೆ ಅಳವಡಿಸಲಾದ ಕಬ್ಬಿಣದ ಗೂಡಿನ ಒಳಗೆ ಲಾಕ್ ಮಾಡಿ ಇಳಿಸಾಯಿತು. ಬಳಿಕ ಕೊಡಗು ಜಿಲ್ಲೆಯ ಮತ್ತಿಗೋಡು ಎಲಿಫೆಂಟ್ ಕ್ಯಾಂಪ್‌ಗೆ ಸಾಗಿಸಲಾಯಿತು. ಈ ಸಮಯದಲ್ಲಿ ಮೆಸ್ಕಾಂ ಇಲಾಖೆ ರಸ್ತೆ ಬದಿಯ ವಿದ್ಯುತ್ ಲೈನ್‌ಗಳನ್ನು ಆಫ್ ಮಾಡಿ ಸಹಕರಿಸಿತ್ತು.
ಇಬ್ಬರನ್ನು ಕೊಂದದ್ದು ಇದೇ ಆನೆ?: ಕಾಡಾನೆ ದಾಳಿಯಿಂದ ಮೃತರಾದ ರಂಜಿತಾ ರೈ ಮತ್ತು ರಮೇಶ್ ರೈ ಅವರನ್ನು ಕೊಂದ ಆನೆಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ. ಡ್ರೋನ್ ಟೆಂಪರೇಚರ್ ಟ್ಯ್ಯಾಕ್ ಮತ್ತು ತರಬೇತಿ ಪಡೆದ ಆನೆ ಟ್ಯ್ರಾಕರ್ಸ್ ಮೂಲಕ ಇದನ್ನು ಪತ್ತೆ ಹಚ್ಚಲಾಗಿದೆ. ಮಾತ್ರವಲ್ಲದೇ ಆನೆಯ ಕಾಲಿನಲ್ಲಿ ಮತ್ತು ದಂತದಲ್ಲಿ ರಕ್ತದ ಕಲೆಯಿದ್ದು, ಇದೇ ಆನೆಯೇ ದಾಳಿ ಮಾಡಿದೆ ಎನ್ನಲಾಗಿದೆ.
ಲಾಠಿ ಚಾರ್ಚ್:ಸಂಜೆ ವೇಳೆಗೆ ಕಾಡಾನೆಯನ್ನು ಸೆರೆ ಹಿಡಿದಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯಲ್ಲಿ ನಡೆದ ಮೊದಲು ಎಲಿಫಂಟ್ ಆಪರೇಷನ್ ಕಾರ್ಯಾಚರಣೆ ನೋಡಲು ತಾಲೂಕಿನ ವಿವಿಧ ಕಡೆಗಳಿಂದ ಸ್ಥಳಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆನೆಯನ್ನು ಎಳೆದುಕೊಂಡು ಬರುವ ವೇಳೆ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ದೂರ ನಿಲ್ಲಲು ಎಷ್ಟೇ ಮನವಿ ಮಾಡಿದರೂ ಸಾರ್ವಜನಿಕರು ಕಿವಿಗೊಡಲಿಲ್ಲ. ಈ ಸಂದರ್ಭದಲ್ಲಿ ಲಘು ಲಾಠಿ ಚಾರ್ಜ್ ಮೂಲಕ ಸೇರಿದ್ದ ಜನರನ್ನು ಚದುರಿಸಲಾಯಿತು.
ಅಧಿಕಾರಿಗಳ ಮೇಲೆ ಹಲ್ಲೆ:ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ನಂತರ ಉಳಿದ ಆನೆಗಳನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ಕೆಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಿದ ನಂತರ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ವಿವರಿಸಿದರು. ಆದರೆ ಇದಕ್ಕೆ ಕಿವಿಗೊಡದ ಕೆಲವರು ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ವಾಹನಗಳಿಗೆ ಕಲ್ಲು ತೂರಾಟ ನಡೆಸಿದರು ಎನ್ನಲಾಗ್ತಿದೆ.
ಇದರಿಂದ ಪೊಲೀಸ್ ಇಲಾಖೆಯ ಎರಡು, ಅರಣ್ಯ ಇಲಾಖೆಯ ಒಂದು ಮತ್ತು ಅಧಿಕಾರಿಯೋರ್ವರ ಬ್ರೀಝಾ ವಾಹನ ಜಖಂಗೊಂಡಿವೆ. ಕೆಲವರು ಪುತ್ತೂರು ಡಿವೈಎಸ್ಪಿ, ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ರಾತ್ರಿ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದವರಿಗಾಗಿ ಶೋಧ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕಡಬ: ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ಆರಂಭ