ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಸ್ಲೀಪರ್ ಬಸ್ಸೊಂದಕ್ಕೆ ಕಾಡಾನೆ ದಂತದಿಂದ ತಿವಿದು ಬಸ್‌ಗೆ ಹಾನಿಯಾದ ಘಟನೆ ಕುಕ್ಕೆ ಸುಬ್ರಹ್ಮಣ್ಯ - ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಇದಾಗಿತ್ತು. ಚಾಲಕ ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆ ಕಂಡು ಅನಾಹುತ ತಪ್ಪಿಸಲು ಯತ್ನಿಸಿದ್ದಾರೆ. ಆದರೂ ಆನೆ ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ ಎನ್ನಲಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ: ಕಾಲೇಜು ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಮುಖ್ಯ ರಸ್ತೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಕಾರೊಂದು ಹಿಂಬದಿಯಿಂದ ಗುದ್ದಿದ್ದು ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಿಂಚನ ವಿ.ಪಿ, ಬಿಂಬಿಕ, ಹನಿಷ್ಕ.ಎಸ್.ಆರ್, ಶಾಲಿನಿ ಎಂ, ಜಷ್ಮಿತಾ ಹಾಗು ಕೃತಿ ಗಾಯಗೊಂಡಿದ್ದಾರೆ.
ವಲ್ಲೀಶ ಸಭಾಭವನದ ಎದುರಿನ ಕಾಲೇಜು ತಿರುವಿನ ಸಮೀಪ ವಿದ್ಯಾರ್ಥಿಗಳು ಸುಬ್ರಹ್ಮಣ್ಯ ಪೇಟೆ ಕಡೆ ತೆರಳುತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟು ಗಾಯಗಳಾಗಿವೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸಿಂಚನ ವಿ.ಪಿ ಸುಳ್ಯ ಸರಕಾರಿ ಆಸ್ಪತ್ರೆ ಹಾಗೂ ಬಿಂಬಿಕ, ಹನಿಷ್ಕ ಎಸ್.ಆರ್ ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಶಾಲಿನಿ ಎಂ, ಜಷ್ಮಿತಾ, ಕೃತಿ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.