ಮಂಗಳೂರು:ಗೋಬರ್ ಗ್ಯಾಸ್ ಗುಂಡಿಯೊಳಗೆ ಬಿದ್ದು, ರಕ್ಷಿಸಲ್ಪಟ್ಟ ಕಾಡುಕೋಣವೊಂದು ಮರಳಿ ಕಾಡಿನಿಂದ ಹಿಂದಿರುಗಿ ಬಂದು ಬಾಲಕಿ ಹಾಗೂ ಮಹಿಳೆಯೋರ್ವರನ್ನು ಗಾಯಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ಪುರ್ಲೊಟ್ಟುವಿನಲ್ಲಿ ನಡೆದಿದೆ.
ಮಾಣಿ ಸಮೀಪದ ಪೇರಮೊಗ್ರು ನಿವಾಸಿ ಹರ್ಷಿತಾ (12) ಹಾಗೂ ಅವರ ಸಂಬಂಧಿ ಚಂದ್ರಾವತಿ ಎಂಬುವವರು ಗಾಯಗೊಂಡಿದ್ದು, ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಬರ್ ಗ್ಯಾಸ್ ಗುಂಡಿಗೆ ಬಿದ್ದ ಕಾಡುಕೋಣದಿಂದ ದಾಳಿ ಕಾಡಬೆಟ್ಟುವಿನ ಪೊರ್ಲೊಟ್ಟು ನಿವಾಸಿ ಆಲ್ಫ್ರೆಡ್ ಡಿಸೋಜ ಎಂಬವರ ಮನೆಯ ಹಿತ್ತಿಲಲ್ಲಿದ್ದ ಗೋಬರ್ ಗ್ಯಾಸ್ ಗುಂಡಿಗೆ ಬಿದ್ದಿದ್ದ ಕಾಡು ಕೋಣ ಮೇಲೆ ಬರಲು ಒದ್ದಾಡುತ್ತಿತ್ತು. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು, ತಕ್ಷಣ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆಯ ತಂಡ ಜೆಸಿಬಿ ಮೂಲಕ ಗೋಬರ್ ಗ್ಯಾಸ್ ಗುಂಡಿಯನ್ನು ಅಗೆದು ಕಾಡುಕೋಣವನ್ನು ಮೇಲೆತ್ತಿ ಕಾಡಿಗೆ ಅಟ್ಟಲಾಗಿತ್ತು.
ಬಳಿಕ ಪೇರಮೊಗ್ರು ಬಳಿಯಲ್ಲಿ ಹರ್ಷಿತಾ ಹಾಗೂ ಚಂದ್ರಾವತಿ ಕಾಡಬೆಟ್ಟುವಿಗೆ ನಡೆದುಕೊಂಡು ಹೋಗುತ್ತಿರುವಾಗ ಈ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾಮ ಹರ್ಷಿತಾ ಎಡಗೈಗೆ ಗಾಯವಾಗಿದ್ದು, ಚಂದ್ರಾವತಿ ಯವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೊಡ್ಯಮಲೆ ರಕ್ಷಿತಾರಣ್ಯದಿಂದ ಈ ಕಾಡುಕೋಣ ನೀರು ಹುಡುಕಿಕೊಂಡು ಬಂದಿರಬಹುದೆಂದು ಶಂಕಿಸಲಾಗಿದೆ.