ಕಡಬ :ತಾಲೂಕಿನ ಕುಂತೂರು ಗ್ರಾಮದ ಎರ್ಮಾಳ ಎಂಬಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಗಳು ಪತ್ತೆಯಾದ ಬೆನ್ನಲ್ಲೇ, ಮಹಿಳೆಯೋರ್ವರು ಎರಡು ತಿಂಗಳ ಬಳಿಕ ತನ್ನ ಪತಿ ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎರ್ಮಾಳ ಎಂಬಲ್ಲಿನ ಸತೀಶ್(50) ಎಂಬುವರು ಕಳೆದ ಆಗಸ್ಟ್ 2 ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಗೀತಾ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈಗ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಪತಿ ನಾಪತ್ತೆಯಾಗಿ 2 ತಿಂಗಳಾದ್ರೂ ದೂರು ದಾಖಲಿಸದ ಪತ್ನಿ
ಸತೀಶ್ ನಾಪತ್ತೆಯಾಗಿ ಎರಡು ತಿಂಗಳಾದ್ರೂ ನಾಪತ್ತೆಯಾದ ವ್ಯಕ್ತಿಯ ಪತ್ನಿಯಾಗಲೀ ಇತರ ಸಂಬಂಧಿಕರಾಗಲೀ ದೂರು ನೀಡಿರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯ ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಅನ್ನಡ್ಕ ಎಂಬಲ್ಲಿ ಸಣ್ಣ ಹಳ್ಳವೊಂದರಲ್ಲಿ ಮಾನವನ ತಲೆ ಬುರುಡೆಯೊಂದು ಮಳೆ ನೀರಿಗೆ ಕೊಚ್ಚಿಕೊಂಡು ಬಂದಿತ್ತು.
ತಲೆಬುರುಡೆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಹಿನ್ನೆಲೆಯಲ್ಲಿ ನಿನ್ನೆ ಹುಡುಕಾಟ ನಡೆಸಿದ ಸ್ಥಳೀಯರಿಗೆ ಕೆಲ ಮಾನವ ಅಸ್ತಿ ಪಂಜರಗಳೂ ಕಾಣಸಿಕ್ಕಿವೆ. ಅಸ್ತಿ ಪಂಜರ ಸಿಕ್ಕ ವಿಚಾರ ಪ್ರಚಾರವಾಗುತ್ತಿದ್ದಂತೆ ಎರಡು ತಿಂಗಳ ಹಿಂದೆ ನಾಪತ್ತೆಯಾದ ಸತೀಶ್ ಬಗ್ಗೆ ದೂರು ನೀಡದ ಸತೀಶ್ ಪತ್ನಿ, ನಿನ್ನೆ ಕಡಬ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ತನ್ನ ಗಂಡ ಮದ್ಯಪಾನ ವ್ಯಸನಿಯಾಗಿದ್ದು, ಅವರು ವಿನಾಕಾರಣ ಜಗಳ ಮಾಡುತ್ತಿದ್ದರು. ಆಗಾಗ ಮನೆಬಿಟ್ಟು ಹೋಗುತ್ತಿದ್ದು, 10-15 ದಿನಗಳ ಬಳಿಕ ಮನೆಗೆ ಬರುತ್ತಿದ್ದರು. ಸತೀಶ್ ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಎಲ್ಲಿಯೋ ದೂರ ಹೋಗಿ ನೆಲೆಸಿರಬಹುದೆಂದು ತಿಳಿದು ತಾನು ದೂರು ನೀಡಿರಲಿಲ್ಲ.
ಇದೀಗ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಮಾನವನ ದೇಹದ ಭಾಗಗಳು ಸಿಕ್ಕಿರುವ ಹಿನ್ನೆಲೆ ಇದು ಕಾಣೆಯಾದ ತನ್ನ ಪತಿ ಸತೀಶ್ರ ದೇಹವೇ ಎಂಬ ಅನುಮಾನ ಇರುವುದರಿಂದ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಪೊಲೀಸರ ತನಿಖೆಯ ನಂತರ ಘಟನೆಯ ಸತ್ಯಾಸತ್ಯಾತೆ ತಿಳಿಯಬೇಕಿದೆ.