ಮಂಗಳೂರು: ಎಲ್ಲ ವಿಚಾರದಲ್ಲಿ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿಟ್ ಕಾಯಿನ್ ಹಗರಣ ವಿಚಾರ ಬಂದಾಗ ಮೌನಿಯಾಗುತ್ತಾರೆ. ಅವರು ಈ ಬಗ್ಗೆ ಯಾವುದೇ ಪ್ರಶ್ನೆಗೂ ಮಾತನಾಡುವುದಿಲ್ಲ ಯಾಕೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜನರ ಪರವಾಗಿಲ್ಲ. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ ಎಂಬುದನ್ನು ಅವರ ಪಕ್ಷದವರೇ ಹೇಳುತ್ತಾರೆ. ಅವರಿಗೆ ಅಭಿವೃದ್ಧಿಗಿಂತ ಕಮಿಷನ್ನಲ್ಲಿ ಮಾತ್ರ ಆಸಕ್ತಿ. ಮಾಜಿ ಸಚಿವ ಯೋಗೇಶ್ವರ್, ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ, ಮಾಧುಸ್ವಾಮಿ ತಮ್ಮದೇ ಸರ್ಕಾರದ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಗಂಡ - ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಜನರಿಗೆ ಈ ಸರ್ಕಾರದಿಂದ ಸಂಕಷ್ಟವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬ ಪರಿಸ್ಥಿತಿ ಇದೆ. ನಳಿನ್ ಕುಮಾರ್ ಕಟೀಲ್ ಅವರಿಗೆ ಇಲ್ಲಿ ಭಾರಿ ಗೌರವ ಇದೆ ಎಂದು ತಿಳಿದುಕೊಂಡಿದ್ದೆ. ಆದರೆ, ಅವರಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಗೊತ್ತಾಗಿದೆ. ಕಟೀಲ್ ಅವರ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗಬಹುದು ಎಂದು ಯಡಿಯೂರಪ್ಪ ಹೇಳಿದ್ದರು. ಪ್ರಧಾನಿ ಮೋದಿ ನಳಿನ್ ಕುಮಾರ್ ಕಟೀಲ್ ಹೆಸರನ್ನು ವೇದಿಕೆಯಲ್ಲಿ ಹೇಳದೇ ನಿರ್ಲಕ್ಷಿಸಿದ್ದಾರೆ ಎಂದರು.
ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಿದೆ. 2 ಲಕ್ಷ 40 ಸಾವಿರ ಉದ್ಯೋಗ ಖಾಲಿಯಿದ್ದರೂ ಈ ಸರ್ಕಾರ ಒಂದು ಉದ್ಯೋಗ ಮಾಡಿಲ್ಲ. ಪೊಲೀಸ್, ಕೆಪಿಟಿಸಿಎಲ್ ಉದ್ಯೋಗದ ನೇಮಕಾತಿ ವಿಚಾರದಲ್ಲಿ ಹಗರಣಗಳಾಗಿದೆ. ಕೆಪಿಟಿಸಿಎಲ್ ಉದ್ಯೋಗ ನೇಮಕಾತಿ ವಿಚಾರ ತನಿಖೆ ಮಾಡಿ ಅಂದರೆ ಕಾಂಗ್ರೆಸ್ ಹೆಸರು ಬರುತ್ತೆ ಅಂತಾರೆ. ಕಾಂಗ್ರೆಸ್ ಹೆಸರು ಬಂದರೆ ಒದ್ದು ಒಳಗೆ ಹಾಕಿ. ಪಿಎಸ್ಐ ಹಗರಣ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.
ಕಾರ್ಯಕರ್ತರಿಗೆ ಬಿಜೆಪಿ ಸರ್ಕಾರದಿಂದ ದೋಖಾ:ಜಿಲ್ಲೆಗೆ ಮೋದಿ ಬಂದಾಗ ಬಹಳ ನಿರೀಕ್ಷೆ ಜನರಲ್ಲಿತ್ತು. ಡಬಲ್ ಇಂಜಿನ್ ಸರ್ಕಾರದ ಅಚ್ಚೆ ದಿನ್ ನಿರೀಕ್ಷೆ ಮಾಡಿದ್ದರು. ಕರಾವಳಿ ಭಾಗ ಅವರ ಸಿದ್ದಾಂತದ ಪ್ರಯೋಗಾಲಯ ಆಗಿರುವುದರಿಂದ ಈ ಬಗ್ಗೆ ಹೆಚ್ಚು ನಿರೀಕ್ಷೆ ಇತ್ತು. ಆದರೆ, ಅದು ಈಡೇರಲಿಲ್ಲ. ಮೋದಿ ಬಂದು ಹೋದ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಸರ್ಕಾರದಿಂದ ದೋಖಾ ಆಗಿದೆ ಎಂದು ಅಭಿಪ್ರಾಯ ಬರುತ್ತಿದೆ.