ಮಂಗಳೂರು:ಇದೊಂದು ಅಪರೂಪದ ಮಿಲನ. ಇನ್ನು ಸಿಗುವುದೇ ಇಲ್ಲ ಎಂದುಕೊಂಡಿದ್ದ ಮನೆಯ ಸದಸ್ಯ ಮತ್ತೊಮ್ಮೆ ಜೊತೆ ಸೇರಿದ ಕ್ಷಣ. ಅಷ್ಟೇ ಅಲ್ಲ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಕಾಣೆಯಾದ ಮಗ ಆರೋಗ್ಯವಾಗಿ ಸಿಕ್ಕಿದ್ದು, ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಮನೆಸೇರಿದ ಮಗ..ಈ ಅಪೂರ್ವ ಮಿಲನ ಸಾಧ್ಯವಾಗಿದ್ದು ವೈಟ್ ಡೌವ್ಸ್ ಸಂಸ್ಥೆಯಿಂದ ಆಂಧ್ರಪ್ರದೇಶದಲ್ಲಿ ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ಗುಣಮುಖನಾಗಿ ಮನೆಯವರ ಜೊತೆ ಸೇರಿದ್ದಾನೆ. ಇಂತಹ ಒಂದು ಸಾರ್ಥಕ ಕಾರ್ಯ ಸಾಧ್ಯವಾಗಿದ್ದು, ಮಂಗಳೂರಿನ ವೈಟ್ ಡೌವ್ಸ್ ಸಂಸ್ಥೆ ಮೂಲಕ. ಮಂಗಳೂರಿನ ವೈಟ್ ಡೌವ್ಸ್ ಸಂಸ್ಥೆ ನಿರ್ಗತಿಕರನ್ನು ಆರೈಕೆ ಮಾಡಿ ಅವರನ್ನು ಕುಟುಂಬಸ್ಥರೊಡನೆ ಸೇರಿಸಲು ಶ್ರಮಿಸುವ ಸಾರ್ಥಕ ಕೇಂದ್ರ.
ಸುಮಾರು ಒಂದೂವರೆ ವರ್ಷಗಳ ಹಿಂದೆ ಮಂಗಳೂರಿನ ಬೀದಿಯಲ್ಲಿ ಸುಟ್ಟ ಗಾಯಗಳೊಂದಿಗೆ ನರಳಾಡುತ್ತಿದ್ದ ಸುಬ್ರಹ್ಮಣ್ಯಂ ಎಂಬಾತನನ್ನು ಮಂಗಳೂರಿನ ವೈಡ್ ಡವ್ಸ್ ಸಂಸ್ಥೆಯ ಸ್ಥಾಪಕಿ ಕೊರಿನ್ ರಸ್ಕಿನ್ ಅವರು ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದು ಆರೈಕೆ ಮಾಡಿದ್ದರು. ಆ ವೇಳೆ, ಆತ ಮಾನಸಿಕ ಅಸ್ವಸ್ಥನೆಂದು ಅರಿತು ಚಿಕಿತ್ಸೆ ನೀಡಲಾಯಿತು. ಗುಣಮುಖನಾದ ಈತ ಕ್ರಮೇಣ ಮನೆಯವರನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಈತನಿಗೆ ಮನೆಯ ಪೋನ್ ನಂಬರ್ ನೆನಪಿದ್ದು ಅದನ್ನೂ ಹೇಳಿದ್ದಾನೆ. ಸತತ ಪ್ರಯತ್ನ ಮಾಡಿದ ನಂತರ ವೈಟ್ ಡೌವ್ ಸಂಸ್ಥೆಯವರು ಆತನ ಮನೆಯವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಬ್ರಹ್ಮಣ್ಯಂ ಆಂಧ್ರಪ್ರದೇಶದಿಂದ ನಾಪತ್ತೆಯಾದ ಬಳಿಕ ಈತನ ಮನೆಯವರು ಅಲ್ಲಿ ಹುಡುಕದ ಜಾಗವಿಲ್ಲ. ಕಣ್ಣೀರು ಹಾಕದ ದಿನವಿಲ್ಲ. ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ, ಮಂಗಳೂರಿನ ವೈಟ್ ಡೌಸ್ ಸಂಸ್ಥೆಯಲ್ಲಿ ಈತ ಇರುವುದು ಗೊತ್ತಾಗಿ ಆತನ ಸಹೋದರ, ಸಹೋದರನ ಪತ್ನಿ ಮತ್ತು ಸಂಬಂಧಿಗಳು ನೇರವಾಗಿ ಮಂಗಳೂರಿಗೆ ಬಂದಿದ್ದಾರೆ.
ಇಂದು ವೈಟ್ಡೌಸ್ ಸಂಸ್ಥೆಯಲ್ಲಿ ನೂರಾರು ನಿರ್ಗತಿಕರ ಸಮ್ಮುಖದಲ್ಲಿ ಸುಬ್ರಹ್ಮಣ್ಯಂ ನನ್ನು ಅವನ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಮೂಲಕ ವೈಟ್ ಡೌವ್ಸ್ ಸಂಸ್ಥೆ ಕಳೆದುಹೋಗಿದ್ದ ನಿರ್ಗತಿಕರನ್ನು ಮನೆಯವರ ಜೊತೆಗೂಡಿಸುವ 390 ನೇ ಪ್ರಕರಣವಾಗಿದೆ. ಕಳೆದ ಒಂದು ವರ್ಷದಿಂದ ಹುಡುಕಾಡಿದ ಬಳಿಕ ಸುಬ್ರಹ್ಮಣ್ಯಂ ಇನ್ನು ಸಿಗುವುದೇ ಇಲ್ಲ ಎಂದುಕೊಂಡಿದ್ದ ಅವರಿಗೆ ಮತ್ತೆ ಆತನನ್ನು ಕಂಡು ಸಂತೋಷವಾಗಿದೆ.