ಮಂಗಳೂರು: ಮಾನವ ಕಳ್ಳಸಾಗಣೆ ವಿಚಾರದಲ್ಲಿ ಮಂಗಳೂರಿನಲ್ಲಿ ಇತ್ತೀಚೆಗೆ 38 ಶ್ರೀಲಂಕಾ ಪ್ರಜೆಗಳ ಬಂಧಿಸಿರುವ ಪ್ರಕರಣವನ್ನು ಎನ್ಐಎಗೆ ಒಪ್ಪಿಸಲಾಗಿದೆ. ಬಂಧಿತರಿಗೆ ಎಲ್ಟಿಟಿಇ ಪ್ರಭಾವ ಇರಬಹುದು ಎಂಬ ಶಂಕೆ ಹಿನ್ನೆಲೆ ಕೇಸ್ ಅನ್ನು ಎನ್ಐಎಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಲ್ಲಿ ಲಂಕಾ ಪ್ರಜೆಗಳ ಬಂಧನ ಪ್ರಕರಣ: ಕೇಸ್ ಎನ್ಐಎಗೆ ಒಪ್ಪಿಸಿರುವುದಕ್ಕೆ ಕಾರಣ? - ಮಂಗಳೂರು ಲೇಟೆಸ್ಟ್ ನ್ಯೂಸ್
38 ಶ್ರೀಲಂಕಾ ಪ್ರಜೆಗಳ ಬಂಧನ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿರುವುದಕ್ಕೆ, ಅವರಿಗೆ ಎಲ್ಟಿಟಿಇ ಪ್ರಭಾವ ಇರಬಹುದು ಎಂಬ ಶಂಕೆಯೇ ಕಾರಣ ಎಂದು ತಿಳಿದು ಬಂದಿದೆ.
ಬಂಧಿತ 38 ಮಂದಿಯೂ ತಮಿಳಿಗರಾಗಿದ್ದು, ಇವರಲ್ಲಿ ಸಿಂಹಳಿಯರು ಯಾರೂ ಇಲ್ಲ ಎನ್ನಲಾಗ್ತಿದೆ. ಅಲ್ಲದೇ ಇವರೆಲ್ಲರೂ ಎಲ್ಟಿಟಿಇ ಪ್ರಭಾವ ಇರುವ ಉತ್ತರ ಶ್ರೀಲಂಕಾ ಪ್ರದೇಶದಲ್ಲಿದ್ದರು. ಆದ್ದರಿಂದಲೇ ಎನ್ಐಎ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗ್ತಿದೆ.
ಕೆನಡಾ ದೇಶದಲ್ಲಿ ಉದ್ಯೋಗ ದೊರಕಿಸಿಕೊಡುವ ಆಮಿಷವೊಡ್ಡಿ ಏಜೆಂಟರು ಈ 38 ಮಂದಿಯನ್ನು ಕರೆತಂದಿದ್ದರು. ತಮಿಳುನಾಡಿನ ತೂತುಕಡಿ ಎಂಬಲ್ಲಿಗೆ ದೋಣಿಯಲ್ಲಿ ಬಂದಿರುವ ಇವರನ್ನು ಆ ಬಳಿಕ ಬೆಂಗಳೂರಿಗೆ ಬಸ್ನಲ್ಲಿ ಕಳುಹಿಸಿ ಅಲ್ಲಿಂದ ಮಂಗಳೂರಿಗೆ ಕರೆತರಲಾಗಿತ್ತು. ಆದರೆ, ಜೂ. 10ರಂದು ಮಂಗಳೂರು ಪೊಲೀಸರು ಇವರನ್ನು ವಶಕ್ಕೆ ತೆಗೆದುಕೊಂಡಿದ್ದರು. ತಮಿಳುನಾಡಿನಲ್ಲಿಯೂ ಈ ಬಗ್ಗೆ ಪ್ರಕರಣ ದಾಖಲಾಗಿದೆ.