ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೂ ಮಂಗಳೂರಿಗೂ ಭಾರಿ ನಿಕಟವಾದ ನಂಟಿದೆ. ಅದೇ ಕಾರಣಕ್ಕೆ ಅವರು ಯುಪಿಯ ಸಿಎಂ ಗಾದಿಯನ್ನು ಎರಡನೇ ಬಾರಿ ಅಲಂಕರಿಸಿದಾಗ ಮಂಗಳೂರಿನ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ಕಳೆಗಟ್ಟಿತ್ತು. ಹಾಗಾದರೆ, ಯೋಗಿ ಆದಿತ್ಯನಾಥ್ಗೂ ಕದ್ರಿಯ ಯೋಗೀಶ್ವರ ಮಠಕ್ಕೂ ಇರುವ ಸಂಬಂಧವೇನು?.
ಸಿಎಂ ಯೋಗಿಯವರು ನಾಥಪಂಥದ ಮೂಲ ಮಠವಾದ ಉತ್ತರದ ತ್ರಯಂಬಕೇಶ್ವರದ ಗೋರಖ್ ಪುರ ಮಠದ ಮಠಾಧೀಶ. ಈ ಗೋರಖ್ ಪುರ ಮಠಕ್ಕೂ ಕದ್ರಿಯ ಯೋಗೀಶ್ವರ ಮಠಕ್ಕೂ ನಿಕಟವಾದ ಸಂಬಂಧವಿದೆ. ಕದ್ರಿಯ ಯೋಗೀಶ್ವರ ಮಠದ ಪೀಠಾಧಿಪತಿ ಆಯ್ಕೆ ಮಾಡುವ ಅಧಿಕಾರವಿರುವುದು ಗೋರಖ್ ಪುರದ ಮಠಾಧೀಶರಿಗೆ.
ಈಗಿನ ಗೋರಖ್ಪುರದ ಮಠದ ಮಠಾಧೀಶರಾಗಿರೋದು ಯೋಗಿ ಆದಿತ್ಯನಾಥರು. ಪ್ರಸ್ತುತ ಕದ್ರಿ ಮಠದಲ್ಲಿರುವ ಮಠಾಧೀಶರ ಆಯ್ಕೆಯಲ್ಲೂ ಯೋಗಿ ಆದಿತ್ಯನಾಥರು ಪ್ರಮುಖ ಪಾತ್ರ ವಹಿಸಿದ್ದರು. 2016ರಲ್ಲಿ ಕದ್ರಿ ಮಠದ ಪೀಠಾಧಿಪತಿ ನಿರ್ಮಲನಾಥ ಜೀಯವರ ಪಟ್ಟಾಭಿಷೇಕವನ್ನು ಯೋಗಿ ಆದಿತ್ಯನಾಥರವರೇ ನೆರವೇರಿಸಿದ್ದರು. ಆಗ 12 ವರ್ಷಗಳಿಗೊಮ್ಮೆ ಉತ್ತರದಿಂದ ಬರುವ ಝಂಡಿಯಲ್ಲೂ ಯೋಗಿ ಆದಿತ್ಯನಾಥರು ಭಾಗವಹಿಸಿದ್ದರು.