ಮಂಗಳೂರು: ಶಿಕ್ಷಣ ಜೀವನದಲ್ಲಿ ಬಹಳ ಮಹತ್ವ ವಹಿಸುವ ಪ್ರಮುಖಾಂಶ. ಹಾಗಾಗಿ, ಶಿಕ್ಷಣ ನೀತಿಯಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಕೇಂದ್ರ ನಿರ್ಧರಿಸಿದೆ. 2022 ರಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಲಿದ್ದು, ಇದಕ್ಕೆ ಬೇಕಾದ ಪ್ರಕ್ರಿಯೆಗಳು ಚುರುಕಿನಿಂದ ನಡೆಯಬೇಕಾಗಿದೆ. ಈಗಾಗಲೇ ಶಿಕ್ಷಣ ಸಂಸ್ಥೆಗಳು ಈ ವಿಷಯದತ್ತ ಒತ್ತು ನೀಡಿ ಮುಂದೆ ಸಾಗುತ್ತಿದೆ.
ಈಗಾಗಲೇ ದೇಶದಲ್ಲಿ ರಾಜ್ಯ - ರಾಜ್ಯಕ್ಕೂ, ಪ್ರದೇಶದಿಂದ ಪ್ರದೇಶಕ್ಕೂ ಭಿನ್ನವಾದ ಶಿಕ್ಷಣ ನೀತಿಯಿದೆ. ದೇಶದ ಎಲ್ಲ ಭಾಗಗಳಲ್ಲಿ ಒಂದೇ ರೀತಿಯ ಶಿಕ್ಷಣ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಆಧುನಿಕ ಜನಗತ್ತನ್ನು ಒಟ್ಟುಗೂಡಿಸಿ ಈ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ.
2020ರಲ್ಲಿ ಕ್ಯಾಬಿನೆಟ್ನಲ್ಲಿ ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದ್ದು, 2022ಕ್ಕೆ ಜಾರಿಯಾಗಲಿದೆ ಎಂದು ಘೋಷಿಸಲಾಗಿತ್ತು. ಹೊಸ ಶಿಕ್ಷಣ ನೀತಿ ಜಾರಿಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿದ್ದು, ಪಠ್ಯಕ್ರಮಗಳ ಬದಲಾವಣೆ, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯಗಳು ಮೊದಲಾದ ವಿಚಾರಗಳಲ್ಲಿ ಬದಲಾವಣೆ ನಡೆಯಲಿದೆ.