ಮಂಗಳೂರು:ಗೋಲಿಬಾರ್ನಲ್ಲಿ ಮೃತಪಟ್ಟ ಇಬ್ಬರಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿ, ಪುನಃ ಅದನ್ನು ನಿರಾಕರಿಸುವ ಹೇಳಿಕೆ ನೀಡಿದ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪರಿಹಾರ ನೀಡಲು ನಿರಾಕರಿಸಿದರೆ ಅದಕ್ಕಿಂತಲೂ ಹೆಚ್ಚು ಪರಿಹಾರವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಸಾವಿಗೀಡಾದವರ ಮನೆಯವರಿಗೆ ನೀಡಲಾಗುವುದು ಎಂದು ಹೇಳಿದರು.
ಪರಿಹಾರ ನಿರಾಕರಿಸಿದ ಸಿಎಂ ಕ್ಷಮೆಯಾಚಿಸಲಿ : ಮಾಜಿ ಸಚಿವ ಯು.ಟಿ ಖಾದರ್ ಮುಖ್ಯಮಂತ್ರಿಗಳ ಹೇಳಿಕೆ ಜನರಿಗೆ ನೋವು ತಂದಿದೆ. ಒಮ್ಮೆ ಘೋಷಣೆ ಮಾಡಿದ ಪರಿಹಾರವನ್ನು ಯಾರ ಮಾತು ಕೇಳಿ ವಾಪಸ್ ಪಡೆದದ್ದು ಎಂಬುದನ್ನು ಮುಖ್ಯಮಂತ್ರಿಗಳು ಹೇಳಬೇಕು. ನೋವಿನಲ್ಲಿದ್ದ ಮನೆಯವರಿಗೆ ಸಮಾಧಾನ ಮಾಡಿ ಮತ್ತೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಮುಲ್ಕಿ ಠಾಣೆಗೆ ಬೆಂಕಿ ಹಚ್ಚುವ ಯತ್ನಿಸಿ ಸಾವಿಗೀಡಾದ ಇಬ್ಬರಿಗೆ ಪರಿಹಾರ ನೀಡಲಾಗಿದೆ ಎಂದರು.
ಮಂಗಳೂರು ಹಿಂಸಾಚಾರದ ವಿಚಾರದಲ್ಲಿ ದಿನಕ್ಕೊಂದು ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಇದೇ ವಿಚಾರದಲ್ಲಿ ಸೃಷ್ಟಿಸಲಾಗುತ್ತಿರುವ ಗೊಂದಲದ ಹಿಂದೆ ಯಾರಿದ್ದಾರೆ ಎಂದು ಪ್ರಶ್ನಿಸಿದರು. ಸಚಿವ ಸಿಟಿ ರವಿ ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಹೊರಗಿನ ಜಿಲ್ಲೆಯವರು ಇಲ್ಲಿ ಬಂದು ಗೊಂದಲ ಸೃಷ್ಟಿಸುವುದು ಬೇಡ. ನಮ್ಮ ಜಿಲ್ಲೆಯನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ ಎಂದು ಹೇಳಿದರು.