ಮಂಗಳೂರು:ನಗರದಲ್ಲಿ ಉಗ್ರರಿಗೆ ಬೆಂಬಲವಾಗಿ ಗೋಡೆ ಮೇಲೆ ಬರೆದ ಆರೋಪಿಗಳನ್ನು 15 ದಿನದೊಳಗೆ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಉಗ್ರ ಬರಹ ಕುರಿತು ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಗೋಡೆ ಬರಹ ಯಾರೇ ಬರೆದಿದ್ದರೂ ಸಹಿಸಲು ಸಾಧ್ಯವಿಲ್ಲ. ಈ ಗೋಡೆ ಬರಹ ಬರೆಯುವವರ ಹಿಂದೆ ಯಾರಿದ್ದಾರೆ ಎಂದು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕಾದದ್ದು ಬಿಜೆಪಿ ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿಯಾಗಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗಿದೆ ಎಂದರು.
ಪೊಲೀಸ್ ಇಂಟಲಿಜೆನ್ಸ್ ಏನು ಮಾಡ್ತಾ ಇದ್ದಾರೆ ಎಂದು ಪ್ರಶ್ನಿಸಿದ ಅವರು, ಈ ರೀತಿ ಬರೆದವರು ಯಾರೆ ಇರಲಿ ಅಂತಹ ದೇಶ ದ್ರೋಹಿಗಳನ್ನು ಪತ್ತೆ ಹಚ್ಚಿ ಅವರನ್ನು ಬೇರೆ ದೇಶಕ್ಕೆ ಬಿಟ್ಟು ಬರಬೇಕು. ಅಂತವದಿರಗೆ ನಮ್ಮ ನೆಲದಲ್ಲಿರಲು ಅವಕಾಶ ಕೊಡಬಾರದು ಎಂದರು.
ಗೋಡೆಯ ಮೇಲೆ ಉಗ್ರ ಸಂಘಟನೆ ಹೆಸರಲ್ಲಿ ಆಕ್ಷೇಪಾರ್ಹ ಬರಹ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಗಳು ಕಾನೂನಿಗೆ ಹೆದರುತ್ತಿಲ್ಲ. ಇಂತಹ ಗೋಡೆ ಬರಹಗಳು ಕಾಂಗ್ರೆಸ್ ಸರ್ಕಾರ ಇರುವಾಗ ಇರಲಿಲ್ಲ. ಬಿಜೆಪಿ ಸರ್ಕಾರ ಇರುವಾಗ ಯಾಕೆ ಆಗುತ್ತಿದೆ. ಬಿಜೆಪಿ ಇರುವಾಗ ಇವರಿಗೆ ಧೈರ್ಯ ಹೇಗೆ ಬರುತ್ತಿದೆ ಎಂದು ಖಾದರ್ ಪ್ರಶ್ನಿಸಿದರು. ಇಂತಹ ದೇಶದ್ರೋಹಿಗಳನ್ನು ಬಂಧಿಸದ ಬಿಜೆಪಿ ಸರ್ಕಾರವನ್ನು ಜನರು ಪ್ರಶ್ನಿಸಬೇಕಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಬರುವ ಬಿಜೆಪಿ ಕಾರ್ಯಕರ್ತರಿಗೆ ಗೋಡೆ ಬರಹ ಬರೆದ ದೇಶದ್ರೋಹಿಗಳನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಬೇಕಾಗಿದೆ ಎಂದರು.