ಮಂಗಳೂರು : ಜನರಿಗಾಗಿ ಕೇಂದ್ರ ಸರ್ಕಾರ ಎಲ್ಲಾ ಕೊಡುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಕೊಡುತ್ತಿಲ್ಲ ಎಂಬ ಅರ್ಥ ಬರುವಂತೆ ಕೇಂದ್ರ ಸಚಿವ ಸದಾನಂದ ಗೌಡ ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡಿದ ಆಡಿಯೋ ಒಂದು ವೈರಲ್ ಆಗಿದೆ.
ಕೇಂದ್ರ ಸಚಿವ ಸದಾನಂದಗೌಡರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಫೋನ್ನಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ. ಇದರಲ್ಲಿ ತನ್ನನ್ನು ಬಿಜೆಪಿ ಕಾರ್ಯಕರ್ತ ಪ್ರಶಾಂತ್ ರೈ ಎಂದು ಪರಿಚಯಿಸಿಕೊಂಡು ನೆರೆ ರಾಜ್ಯದಲ್ಲಿ ಒಳ್ಳೆಯ ಪ್ಯಾಕೇಜ್ ಕೊಡುತ್ತಿದ್ದು ಕೇಂದ್ರ ಸರ್ಕಾರ ಕರ್ನಾಟಕವನ್ನು ಯಾಕೆ ನಿರ್ಲಕ್ಷಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಉತ್ತರಿಸಿದ ಸದಾನಂದಗೌಡರು, ನಿಮ್ಮ ರಾಜ್ಯಾಧ್ಯಕ್ಷರಲ್ಲಿ ಕೇಳಿ. ನಾವು ಕೇಂದ್ರದಿಂದ ಏನೆಲ್ಲ ಕೊಡಬೇಕೋ ಅದೆಲ್ಲ ಕೊಟ್ಟಿದ್ದೇವೆ. ರಾಜ್ಯದಿಂದ ನಿಮ್ಮ ನಾಯಕರು ಕೇಳಬೇಕಲ್ವ? ನಾವು ಕೇಂದ್ರದಿಂದ ಮಧ್ಯಪ್ರವೇಶಿಸುವುದಿಲ್ಲ. ಅವರು ಕೇಳಿದ್ದೆಲ್ಲ ಕೊಟ್ಟಿದ್ದೇವೆ. ಇಲ್ಲಿಯದನ್ನು ರಾಜ್ಯದವರು ಸರಿ ಮಾಡಬೇಕು ಎಂದಿದ್ದಾರೆ.
ಕೇಂದ್ರ ಸಚಿವ ಸದಾನಂದಗೌಡರ ವೈರಲ್ ಆದ ಆಡಿಯೋ.. ಇದಕ್ಕೆ ಬಿಜೆಪಿ ಕಾರ್ಯಕರ್ತ, ನಾವು 26 ಸಂಸದರನ್ನು ಕೊಟ್ಟು ಈ ರೀತಿ ಮಾಡಿದರೆ ಮುಂದೆ ಸಮಸ್ಯೆಯಾಗುವುದಿಲ್ವ ಎಂದು ಪ್ರಶ್ನಿಸಿದ್ದಕ್ಕೆ, ಸಂಸದರು ಕೇಂದ್ರದಲ್ವ, ರಾಜ್ಯದಿಂದ ಕೊಡದಿದ್ರೆ ಎಂಪಿಗಳಿಗೆ ಯಾಕೆ ಹೇಳ್ತೀರಾ? ನಿಮ್ಮ ಶಾಸಕರು, ಜಿಲ್ಲಾ ಮಂತ್ರಿಗಳು ಯಾಕಾಗಿ ಇರುವುದು? ಅವರಲ್ಲಿ ಯಾಕೆ ಕೇಳ್ತಾ ಇಲ್ಲ ಎಂದು ಪ್ರಶ್ನಿಸಿದರು.
ನಳಿನ್ ಕುಮಾರ್ ಕಟೀಲ್ ಮತ್ತು ಯಡಿಯೂರಪ್ಪರನ್ನು ನಿದ್ದೆಯಿಂದ ಎಬ್ಬಿಸಲು ನಿಮಗೆ ಕಷ್ಟ ಆಗಿದೆಯಲ್ವ ಎಂಬ ಪ್ರಶ್ನೆಗೆ ನಾವು ಮಾತಾಡಿದರೆ, ಅದು ರಾಜಕೀಯ ಆಗ್ತದೆ. ನೀವೆಲ್ಲ ಹೋಗಿ ಅವರಲ್ಲಿ ಇದೆಲ್ಲ ಆಗಬೇಕು ಎಂದು ಕೇಳಿ. ಅವರೆಲ್ಲ ಕತ್ತೆ ಕಾಯಲು ಇರುವುದಾ ಎಂದು ಪ್ರಶ್ನಿಸಿದರು.
ಮುಂದೆ ಚುನಾವಣೆ ಬಂದಾಗ ಕಷ್ಟವಾಗಲಿದೆ ಎಂದದ್ದಕ್ಕೆ ಅದನ್ನು ಯಾರಿಗೆ ಹೇಳಬೇಕೋ ಅವರಿಗೆ ಹೇಳಬೇಕು ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತನೊಂದಿಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ತುಳುವಿನಲ್ಲಿ ಮಾತಾಡಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.