ಮಂಗಳೂರು: ಗ್ರಾಮ ವಾಸ್ತವ್ಯವನ್ನು ಪೂರೈಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು 1.20 ಕೋಟಿ ರೂ. ಖರ್ಚು ಮಾಡಿ ಸಾಧನೆ ಮಾಡಿದ್ದಾರೆ. ಆದ್ದರಿಂದ ಗ್ರಾಮವಾಸ್ತವ್ಯದ ಕಲ್ಪನೆಯ ಅನುಷ್ಠಾನದ ಮೂಲಕ ಕುಮಾರಸ್ವಾಮಿಯವರು ಶೂನ್ಯ ಸಾಧನೆ ಮಾಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದ್ದಾರೆ.
ನಗರದ ಕೆಪಿಟಿ ಬಳಿಯಲ್ಲಿರುವ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ತಮ್ಮ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯ ಮಾಡುವ ಮೊದಲೇ ನಾನು ಅವರಿಗೆ, 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿರುವ 43 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗಿದೆಯೇ, ಎಷ್ಟು ಶಾಲೆಗಳ ಅಭಿವೃದ್ಧಿ ಆಗಿದೆ, ಎಷ್ಟು ಬಡವರ ಕಲ್ಯಾಣ ಯೋಜನೆಯ ಅನುಷ್ಠಾನ ಆಗಿದೆ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಗ್ರಾಮವಾಸ್ತವ್ಯ ಮಾಡಿ ಎಂದು ಆಗ್ರಹಿಸಿದ್ದೆ ಎಂದು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾತಿನ ಭರದಲ್ಲಿ ಬಿಜೆಪಿಯವರು ಸರಕಾರ ನಡೆಸುವಂತಹ ಹಗಲು ಗನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾವು ಯಾರೂ ಹಗಲುಗನಸು ಕಾಣುತ್ತಿಲ್ಲ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರಿಗೆ ಕೆಟ್ಟ ಕನಸು ಬೀಳುತ್ತಿದೆ. ದೇವೇಗೌಡರು ಡಿಸೆಂಬರ್ನಲ್ಲಿ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿದರೆ, ಸಿದ್ದರಾಮಯ್ಯ ಬಾದಾಮಿಯಲ್ಲಿ ಪ್ರಗತಿ ಪರಿಶೀಲನೆ ಮಾಡಿ, ಅಹಿಂದ ಚಳುವಳಿ ಮಾಡಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ರೇವಣ್ಣ ಕುಮಾರ್, ನನ್ನ ಸಾವು ಆದರೆ ಅದಕ್ಕೆ ನೇರವಾಗಿ ರಾಜ್ಯ ಸರಕಾರ ಕಾರಣ ಎಂದು ಪತ್ರವನ್ನು ಬರೆದು ನಿನ್ನೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕತ್ತು ಕೊಯ್ದುಕೊಂಡಿದ್ದರು. ಗ್ರಂಥಾಲಯ ಪಾಲಕರಿಗೆ ರಾಜ್ಯ ಸರಕಾರ ನೀಡುತ್ತೇವೆ ಎಂಬ ಸಂಬಳವನ್ನು ನೀಡದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಲು ಯತ್ನಿಸಿದ್ದರು. ಇಂತಹ ಮೋಸವನ್ನು ರಾಜ್ಯ ಸರಕಾರ ಜನರಿಗೆ ಮಾಡಿದೆ. ಇದರ ಬಗ್ಗೆ ಪರಿಶೀಲನೆ ಮಾಡಿ ಮೇಲುಸ್ತುವಾರಿ ನೋಡಬೇಕಾದ ಕುಮಾರಸ್ವಾಮಿ ಯವರು ಗ್ರಾಮವಾಸ್ತವ್ಯ ಮಾಡಿ ಒಂದು ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ.
ಎಲ್ಲೋ ಹಳ್ಳಿಯಲ್ಲಿದ್ದು ಕೆಲಸ ಮಾಡಬೇಕಾದ ರೇವಣ್ಣ ವಿಧಾನಸೌಧಕ್ಕೆ ಬಂದು ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ಈ ಘಟನೆ ನಡೆದು 24 ಗಂಟೆಯ ಒಳಗೆ ಬಡವರಿಗೆ ನ್ಯಾಯ ದೊರಕಿಸದಿದ್ದರೆ ನಾವು ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ನಾನು ಕುಮಾರಸ್ವಾಮಿಯವರಿಗೆ ಹೇಳಿದ್ದೆ. ಮುಂದಿನ ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.