ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) :ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರ್ ಎಂಬಲ್ಲಿ ಸೇತುವೆ ನಿರ್ಮಿಸಿಕೊಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಬೇಡಿಕೆ ಈಡೇರಿಸದ ಕಾರಣ ಆ ಭಾಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ನಿನ್ನೆ ಹೊಳೆಗೆ ಮರದ ಸಂಕ(ಸೇತುವೆ) ನಿರ್ಮಿಸುವ ಕಾರ್ಯದಲ್ಲಿ ತೊಡಗಿದರು. ಕಡಬ ತಾಲೂಕಿನ ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ, ಮನವಿ ಸಲ್ಲಿಸಲಾಗಿತ್ತು. ಹೀಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು ಎಂದು ಜನರು ತಿಳಿಸಿದ್ದಾರೆ.
ಇತ್ತೀಚೆಗೆ ಇಲ್ಲಿ ಜನರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿ ಬ್ಯಾನರ್ ಅಳವಡಿಸಿದ್ದರು. ಇದನ್ನು ಕಂಡು ಸ್ಥಳೀಯ ಅಧಿಕಾರಿಗಳು ಆಗಮಿಸಿ ಜನರ ಮನವೊಲಿಸಿದ್ದರು. ಅಧಿಕಾರಿಗಳ ಕಸರತ್ತು ಜನರನ್ನು ತೃಪ್ತಿಪಡಿಸುವಲ್ಲಿ ಯಶ ಸಾಧಿಸಲಿಲ್ಲ. ಸೇತುವೆ ನಿರ್ಮಿಸದೇ ಇದ್ದಲ್ಲಿ ಮತದಾನ ಬಹಿಷ್ಕಾರ ಎಂಬ ನಿರ್ಧಾರಕ್ಕೂ ಅಂದೇ ಬಂದಿದ್ದರು. ಹೀಗಿದ್ದರೂ ಸೇತುವೆ ನಿರ್ಮಿಸುವ ಬಗ್ಗೆ ಯಾವುದೇ ಭರವಸೆ ನೀಡದ ಹಿನ್ನೆಲೆಯಲ್ಲಿ ಕುಜುಂಬಾರು ಪರಿಸರದ ಸುಮಾರು 30 ಮನೆಗಳ 80 ಕ್ಕೂ ಅಧಿಕ ಮಂದಿ ಮತ ಚಲಾಯಿಸಲಿಲ್ಲ. ಇದರ ಬದಲಿಗೆ, ಹೊಳೆಗೆ ಸಂಪರ್ಕ ಕಲ್ಪಿಸುವ ಸಂಕ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಆಕ್ರೋಶ ಹೊರಹಾಕಿದರು.
"ನಾವು ಹಲವು ವರ್ಷಗಳಿಂದ ಬೇಡಿಕೆ ಇರಿಸಿದ್ದೇವೆ. ಆದರೂ ಸ್ಪಂದಿಸುತ್ತಿಲ್ಲ. ಭರವಸೆ ನಿಡಿ ಕೈತೊಳೆದುಕೊಳ್ಳುತ್ತಾರೆ" ಎಂದು ದೂರಿದ್ದಾರೆ. "ಈ ಬಾರಿ ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದೇವೆ. ಮುಂದೆಯೂ ಸೇತುವೆ ಆಗದಿದ್ದರೆ, ಲೋಕಸಭಾ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ" ಎಂದು ಗ್ರಾಮಸ್ಥರು ಹೇಳಿದ್ದಾರೆ.