ಮಂಗಳೂರು: ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಭಕ್ತರು ಹಣದ ಬಲದ ಜೊತೆಗೆ ಸಾತ್ವಿಕ ಬಲವನ್ನು ನೀಡಬೇಕು ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಸದಸ್ಯರಾಗಿರುವ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು. ಟ್ರಸ್ಟ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದ ಬಳಿಕ ಸಾರ್ವಜನಿಕರಿಗೆ ಬ್ಯಾಂಕ್ ಖಾತೆ ತಿಳಿಸಲಾಗುತ್ತದೆ. ಆ ಬಳಿಕ ಸಾರ್ವಜನಿಕರು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ತಮ್ಮ ಶಕ್ತಿ ಸಾಮರ್ಥ್ಯ ಅನುಗುಣವಾಗಿ ಒಂದು ರೂಪಾಯಿಯಿಂದ ಒಂದು ಕೋಟಿವರೆಗೂ ದೇಣಿಗೆ ನೀಡಬಹುದು ಎಂದು ಹೇಳಿದರು.
ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಹಣದ ಬಲದ ಜೊತೆ ಸಾತ್ವಿಕ ಬಲವನ್ನೂ ನಿರೀಕ್ಷೆ ಮಾಡಲಾಗುತ್ತಿದೆ. ಈ ಬಗ್ಗೆ ಟ್ರಸ್ಟ್ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಮನೆ ಮನೆಗಳಲ್ಲಿ ರಾಮ ಮಂತ್ರ ಜಪ, ಶ್ರೀರಾಮ ಭಜನೆ ನಡೆಯಬೇಕು. ಮುಂಚಿನ ದಿನಗಳಲ್ಲಿ ಮನೆಮನೆಗಳಲ್ಲೂ ಭಜನೆಗಳು ಕೇಳುತ್ತಿತ್ತು. ಅಳಿದು ಹೋದ ಈ ಸಂಸ್ಕೃತಿ ಮತ್ತೆ ಪುನರ್ಜೀವ ಪಡೆಯಬೇಕು ಎಂದರು.
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಪೇಜಾವರ ಮಠದಿಂದ 5 ಲಕ್ಷ ರೂ ದೇಣಿಗೆ ನೀಡಿದ್ದೇವೆ. ಶ್ರೀ ರಾಮಮಂದಿರ ನಿರ್ಮಾಣಕ್ಕೆ ಶ್ರೀಕೃಷ್ಣನ ಅನುಗ್ರಹ ಬೇಕು ಎಂಬ ನೆಲೆಯಲ್ಲಿ ಶ್ರೀಕೃಷ್ಣ ಪ್ರಸಾದವಾಗಿ ಸದಸ್ಯರಿಗೆ ಶಲ್ಯೆ ನೀಡಿದ್ದೇವೆ ಎಂದರು.
ಮುಂದಿನ ಟ್ರಸ್ಟ್ ಸಭೆಯ ಜೊತೆಗೆ ರಾಮಮಂದಿರ ನಿರ್ಮಾಣ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.