ಕರ್ನಾಟಕ

karnataka

ETV Bharat / state

ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ: ಹೊಸ ಯೋಜನೆಗಳು ಪ್ರಕಟ - Vardhanti Utsava

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವವನ್ನು ಸೋಮವಾರ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಬಂದಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹೆಗ್ಗಡೆ ಅವರನ್ನು ಹಾಡಿ ಹೊಗಳಿದರು.

Dharmasthala program
ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

By

Published : Oct 25, 2022, 9:35 AM IST

ಬೆಳ್ತಂಗಡಿ: ಸತ್ಯ, ಧರ್ಮ, ನ್ಯಾಯ - ನೀತಿಯ ನೆಲೆಯಲ್ಲಿ ಸನಾತನ ಸಂಸ್ಕ್ರತಿಯ ಸಂರಕ್ಷಣೆಯೊಂದಿಗೆ ಮನಪರಿವರ್ತನೆ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿವಿಧ ಕ್ಷೇತ್ರಗಳಲ್ಲಿ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಅವರ ಕ್ರಾಂತಿಕಾರಿ ಪರಿವರ್ತನೆ ಸಾರ್ವಕಾಲಿಕ ಮೌಲ್ಯ ಹೊಂದಿದ್ದು, ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸೋಮವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೆಗ್ಗಡೆಯವರ ಸೇವಾ ಕಾರ್ಯಗಳ ಕಾರ್ಯವೈಖರಿ ಹಾಗೂ ಸಾಧನೆಯ ಫಲವಾಗಿ ಭವಿಷ್ಯದಲ್ಲಿ ಭಾರತ ವಿಶ್ವಗುರು ಮಾನ್ಯತೆ ಹೊಂದಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ಭವಿಷ್ಯದ ಬಗ್ಗೆ ಭರವಸೆ ಮೂಡಿಸಿರುವ ಹೆಗ್ಗಡೆ:ಹೆಗ್ಗಡೆಯವರ ಸೇವೆ ಸಾಧನೆ ಮನ್ನಿಸಿಯೇ ಪ್ರಧಾನಿಯವರು ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ. ಧಾರ್ಮಿಕ, ಸಾಮಾಜಿಕ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಕೃಷಿ, ಪ್ರಕೃತಿ-ಪರಿಸರ ಸಂರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ನಮ್ಮ ಸ್ವಂತಿಕೆ ಬಿಡದೇ ಹೊಸತನದ ಚಿಂತನೆಯೊಂದಿಗೆ ಕ್ರಾಂತಿಕಾರಿ ಪರಿವರ್ತನೆ ಮಾಡಿ ಭವ್ಯ ಭವಿಷ್ಯದ ಬಗ್ಗೆ ಹೆಗ್ಗಡೆ ಅವರು ಹೊಸ ಭರವಸೆ ಮೂಡಿಸಿದ್ದಾರೆ ಎಂದು ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣ ಹಣಗಳಿಸುವ ಉದ್ಯಮವಾಗಿದೆ:ಶುದ್ಧನೀರು ಹಾಗೂ ಪರಿಶುದ್ಧ, ಸಾತ್ವಿಕ ಆಹಾರ ಸೇವನೆಯೊಂದಿಗೆ ನಮ್ಮ ಆರೋಗ್ಯವನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಇಂದು ಶಿಕ್ಷಣ ಹಣ ಗಳಿಸುವ ಉದ್ಯಮವಾಗಿದೆ. ನೈತಿಕ ಮೌಲ್ಯಗಳು ಕುಸಿದಿವೆ. ಪ್ರತಿಭೆ ಕಮರಿ ಹೋಗುತ್ತಿದೆ. ಮನೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುತ ನೈತಿಕ ಶಿಕ್ಷಣ ನೀಡಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಬೇಕು ಎಂದು ಅವರು ಹೇಳಿದರು.

ಜೈನಧರ್ಮದ ತೀರ್ಥಂಕರರಾದ ಆದಿನಾಥ, ಪಾಶ್ರ್ವನಾಥ, ಮಹಾವೀರರಂತೆ ಹೆಗ್ಗಡೆ ಅವರು ಕೂಡ ಸತ್ಯ, ಅಹಿಂಸೆ, ಅಪರಿಗ್ರಹ, ತ್ಯಾಗ, ಬ್ರಹ್ಮಚರ್ಯ ಮೊದಲಾದ ಅಣು ವೃತಗಳನ್ನು ಸ್ವತಃ ಪಾಲನೆ ಮಾಡಿ ಸಮಾಜಕ್ಕೂ ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿ ಹೆಗ್ಗಡೆ ಅವರನ್ನು ಅಭಿನಂದಿಸಿದರು.

ಧರ್ಮಸ್ಥಳದಿಂದ ಹೊಸ ಯೋಜನೆಗಳು ಪ್ರಕಟ:ಗ್ರಾಮೀಣ ಪ್ರದೇಶಗಳಲ್ಲಿ ಆಪತ್ತು ಸಂಭವಿಸಿದಾಗ ತುರ್ತು ನೆರವು ಮತ್ತು ರಕ್ಷಣೆಗಾಗಿ ಮೂರು ಸಾವಿರ "ಶೌರ್ಯ" ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿದೆ. ಸದ್ಯದಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಉದ್ಘಾಟಿಸಲಿದ್ದಾರೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಸಾಮಾನ್ಯ ಸೇವಾ ಕೇಂದ್ರಗಳ ಆರಂಭ:ರಾಜ್ಯಸಭಾ ಸದಸ್ಯನ ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸಲು ಈಗಾಗಲೇ ಆರು ಸಾವಿರದ ಐದುನೂರು ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಈ ವರ್ಷ ಇನ್ನೂ ಒಂದು ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.

ಮಹಿಳಾ ಸಬಲೀಕರಣಕ್ಕೆ ಒತ್ತು: ಕಳೆದ ವರ್ಷ ಆರು ಕೋಟಿ ರೂ. ವೆಚ್ಚದಲ್ಲಿ ಮೂರು ಆಸ್ಪತ್ರೆಗಳಿಗೆ ಮೂರು ಸಿ.ಟಿ. ಸ್ಕ್ಯಾನ್ ಯಂತ್ರಗಳನ್ನು ನೀಡಿದ್ದು. ಈ ವರ್ಷ ಇನ್ನೂ ಮೂರು ಸಿ.ಟಿ. ಸ್ಕ್ಯಾನ್ ಯಂತ್ರಗಳನ್ನು ನೀಡಲಾಗುವುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಐವತ್ತು ಲಕ್ಷ ಕುಟುಂಬಗಳ ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ.

365 ಸರ್ಕಾರಿ ಶಾಲೆಗಳಿಗೆ 2700 ಬೆಂಚು-ಡೆಸ್ಕುಗಳನ್ನು ವಿತರಿಸಲಾಗುವುದು. ಈ ವರ್ಷ 100 ಕೆರೆಗಳ ಹೂಳೆತ್ತಿ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. 40 ಶುದ್ಧಗಂಗಾ ಘಟಕಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಉಜಿರೆಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ 47 ಲಕ್ಷ ರೂ. ನೆರವು ನೀಡಲಾಗುವುದು. ಅನಾಥ ಹಿರಿಯ ನಾಗರಿಕರ ಪಾಲನೆ ಮತ್ತು ಪೋಷಣೆಗಾಗಿ ಐದು ಕೋಟಿ ರೂ. ವೆಚ್ಚದಲ್ಲಿ 500 ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೆಗ್ಗಡೆ ಅವರು ಪ್ರಕಟಿಸಿದರು.

ಇದನ್ನೂ ಓದಿ:'ಕಾಂತಾರ' ಅನುಭವದಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ: ಡಾ.ಡಿ ವೀರೇಂದ್ರ ಹೆಗ್ಗಡೆ

ಈ ವರ್ಷ ಈಗಾಗಲೇ 7312 ದೇವಸ್ಥಾನಗಳಿಗೆ 89 ಕೋಟಿ ರೂ. ನೆರವು ನೀಡಲಾಗಿದೆ. ಧಾರವಾಡದಲ್ಲಿ 200 ಹಾಸಿಗೆಗಳ ಸಾಮಥ್ರ್ಯದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ. ಧರ್ಮಸ್ಥಳದಲ್ಲಿ ಭಕ್ತಾದಿಗಳ ಸೇವೆ ಮತ್ತು ಅನುಕೂಲಕ್ಕಾಗಿ ಕ್ಯೂ ಕಾಂಪ್ಲೆಕ್ಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ದೇವರ ಅನುಗ್ರಹ, ಕುಟುಂಬವರ್ಗದವರ ಸಹಕಾರ ಹಾಗೂ ಸಿಬ್ಬಂದಿಯ ಶ್ರದ್ಧಾ-ಭಕ್ತಿಯ ಕಾರ್ಯನಿಷ್ಠೆಯಿಂದ ಎಲ್ಲ ಸೇವಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ABOUT THE AUTHOR

...view details