ಮಂಗಳೂರು :ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ ದೊರೆತಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಕಾನೂನಾಗಿ ಪರಿವರ್ತನೆಯಾಗಿ ಜಾರಿಗೆ ಬಂದಿದೆ.
ದ.ಕ. ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಾಟದಾರರ ಮೇಲೆ ಈ ಕಾನೂನಿನಡಿ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ವಿನಯ್ ಎಲ್.ಶೆಟ್ಟಿ ಅವರು ಮನಪಾ ಆಯುಕ್ತರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ...ಪುತ್ತೂರಿನಲ್ಲಿ ಚಿರತೆ ಪ್ರತ್ಯಕ್ಷ: ಸೆರೆ ಹಿಡಿಯಲು ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿನಯ್ ಎಲ್.ಶೆಟ್ಟಿ, ಈಗಾಗಲೇ ಅದಕ್ಕೆ ಬೇಕಾಗಿರುವ ನಿಯಮಗಳನ್ನು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ವತಿಯಿಂದ ಸರ್ಕಾರಕ್ಕೆ ನೀಡಲಾಗಿದೆ. ಮುಂದಿನ 15 ದಿನಗಳೊಳಗಾಗಿ ಅದಕ್ಕೆ ನಿಯಮಗಳನ್ನು ತರಲಾಗುತ್ತದೆ ಎಂದರು.
ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ವಿನಯ್ ಎಲ್.ಶೆಟ್ಟಿ ಹಿಂದಿನ ಸರ್ಕಾರದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದ್ದರೂ ಪ್ರಬಲವಾಗಿರಲಿಲ್ಲ. 2008ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದ ಸಂದರ್ಭದಲ್ಲೂ ಗೋಹತ್ಯೆ ಕಾನೂನಿಗೆ ಎರಡು ಅಧಿವೇಶನಗಳಲ್ಲಿ ವಿಧೇಯಕವಾಗಿ ತಂದು ಜಾರಿಗೊಳಿಸಿತ್ತು. ಆದರೆ, ಆಗಿನ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ.
ಅಲ್ಲದೆ ಅಂದಿನ ಯುಪಿಎ ಸರ್ಕಾರ ಎತ್ತು, ಎಮ್ಮೆ, ಕೋಣಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂದು ತಿದ್ದುಪಡಿ ಮಾಡಿ ಪುನಃ ಕಳುಹಿಸಿದ್ದಲ್ಲಿ, ಅದನ್ನು ಕಾನೂನಾಗಿ ಜಾರಿಗೊಳಿಸಬಹುದು ಎಂದು ಹೇಳಿತ್ತು ಎಂದರು.
ಈ ಕಾನೂನಿನನ್ವಯ ಮೊದಲ ಸಲದ ಅಪರಾಧಕ್ಕೆ ₹50 ಸಾವಿರದಿಂದ ₹5ಲಕ್ಷ ದಂಡ, ಎರಡನೇ ಬಾರಿ ಅಪರಾಧ ಎಸಗಿದಲ್ಲಿ ₹5ಲಕ್ಷದಿಂದ ₹10 ಲಕ್ಷ ದಂಡ ವಿಧಿಸಲಾಗುತ್ತದೆ. ಮುಟ್ಟುಗೋಲಾದ ವಾಹನಗಳನ್ನು ಬಿಡಿಸಿಕೊಳ್ಳಲಾಗದ ರೀತಿ ಕಾನೂನು ತಿದ್ದುಪಡಿ ಮಾಡಲಾಗಿದೆ.
ಎಮ್ಮೆ, ಕೋಣಗಳ ವಧೆ ಅವಧಿಯನ್ನು 12ರಿಂದ 13ವರ್ಷಕ್ಕೆ ಏರಿಸಲಾಗಿದೆ. ಇಂದು ಬೆಳಗ್ಗೆ ಮೈಸೂರಿನಲ್ಲಿ ಈ ಕಾನೂನಿನಡಿಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.