ಮಂಗಳೂರು:ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನವೆಂಬರ್ 2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ನವೆಂಬರ್ 2 ರಂದು ಬೆಳಗ್ಗೆ 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು, ನಂತರ ಸುರತ್ಕಲ್ ಎನ್.ಐ.ಟಿ.ಕೆಯಲ್ಲಿ ನಡೆಯುವ 17ನೇ ಘಟಿಕೋತ್ಸವ ಹಾಗೂ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.10ಕ್ಕೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಲಿದ್ದಾರೆ.
ಉಪರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಈಗಿಂದಲೇ ಕೈಗೊಳ್ಳಬೇಕು. ಭದ್ರತೆ ಸೇರಿದಂತೆ ಯಾವುದೇ ರೀತಿಯ ಲೋಪಗಳು ಕಂಡುಬರದಂತೆ ಸಿದ್ಧತೆಗಳನ್ನು ಕೈಗೊಳ್ಳಲು ಅವರು ಸೂಚಿಸಿದರು.
ಉಪರಾಷ್ಟ್ರಪತಿಗಳು ವಿಮಾನ ನಿಲ್ದಾಣದಿಂದ ಸುರತ್ಕಲ್ ಎನ್.ಐ.ಟಿ.ಕೆವರೆಗೆ ರಸ್ತೆಯಲ್ಲಿ ಸಂಚರಿಸಲಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ರಸ್ತೆಯನ್ನು ಕೂಡಲೇ ಸುವ್ಯಸ್ಥಿತಗೊಳಿಸಬೇಕು. ಅದರಲ್ಲೂ ಸುರತ್ಕಲ್‍ನಿಂದ ನಗರದ ಸಕ್ರ್ಯೂಟ್ ಹೌಸ್‍ವರೆಗೆ ಹೆದ್ದಾರಿಯನ್ನು ತಕ್ಷಣದಿಂದಲೇ ರಸ್ತೆ ಸುವ್ಯಸ್ಥಿತಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.