ಮಂಗಳೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಪ್ರಮುಖವಾದದ್ದು. ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ, ಮೌಲ್ಯಗಳಿರುವ ವಿಶ್ವವಿದ್ಯಾಲಯಗಳು ಬೇಕು. ಆದ್ರೆ, ಪ್ರಸ್ತುತ ದೇಶದಲ್ಲಿರುವ ವಿಶ್ವವಿದ್ಯಾಲಯಗಳು ಈ ಹಿಂದೆ ಇದ್ದ ಮೌಲ್ಯಗಳನ್ನು ಕಳೆದುಕೊಂಡಿವೆ ಎಂಬ ಆಪಾದನೆಗಳಿವೆ. ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರುವ ಕುಲಪತಿಗಳ ನೇಮಕಾತಿಯಲ್ಲಿ ಮೆರಿಟ್ ಪದ್ಧತಿ, ಬೇಕಾದ ಅರ್ಹತೆಗಳನ್ನು ಕೈಬಿಟ್ಟಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಹಲವು ವಿಶ್ವವಿದ್ಯಾಲಯಗಳಿದ್ದು, ಅಲ್ಲಿಗೆ ನಾಯಕರಾಗಿ ಗುರುತಿಸಿಕೊಳ್ಳುವ ಕುಲಪತಿಗಳು ಬೇಕೆ ಬೇಕು. ಇಂದಿನ ಕುಲಪತಿಗಳ ಆಯ್ಕೆ ಪ್ರಕ್ರಿಯೆ ರಾಜಕೀಯ, ಜಾತಿ ವ್ಯವಸ್ಥೆ, ಹಣಬಲದ ಮೇಲೆ ನಿಂತಿದ್ದು, ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬುದು ಕೆಲವರ ವಾದ.
ದೇಶದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವೂ ಒಂದು. ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಹೆಚ್ಚಿನ ವಿಶ್ವವಿದ್ಯಾನಿಲಯಗಳಲ್ಲಿ ಮೆರಿಟ್ ಆಧರಿತವಾಗಿ ಕುಲಪತಿ (ಉಪಕುಲಪತಿ ) ನೇಮಕ ನಡೆಯುತ್ತಿಲ್ಲ ಎಂಬ ಆಪಾದನೆಯಿದೆ.