ಮಂಗಳೂರು: ಅಕ್ರಮ ಕಸಾಯಿ ಖಾನೆಯಿಂದ ತಂದ ಗೋಮಾಂಸವನ್ನು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಾಂಸದ ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಿಗೆ ರದ್ದು ಮಾಡುವಂತೆ ಹಾಗೂ ಅಕ್ರಮ ಕಸಾಯಿಖಾನೆ ನಿರ್ಮಾಣ ಮಾಡಿರುವ ಯೂಸುಫ್ ಕುದ್ರೋಳಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗ ಪ್ರತಿಭಟನೆ ನಡೆಸಿತು.
ಪಾಲಿಕೆ ವ್ಯಾಪ್ತಿಯ ಮಾಂಸದಂಗಡಿಯಲ್ಲಿ ಗೋಮಾಂಸ ಮಾರಾಟ: ವಿಹೆಚ್ಪಿ ಬಜರಂಗದಳ ಪ್ರತಿಭಟನೆ ವಿಹೆಚ್ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, 'ಕಳೆದ ಎರಡು ಮೂರು ತಿಂಗಳಲ್ಲಿ ಗೋಮಾಂಸ, ಗೋವಿನ ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಹಲವಾರು ಪ್ರಕರಣಗಳು ದ.ಕ.ಜಿಲ್ಲೆಯಾದ್ಯಂತ ಪತ್ತೆಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ದಂಧೆ, ಡ್ರಗ್ಸ್ ಮಾರಾಟ ದಂಧೆಯಂತೆ ಗೋಮಾಂಸ ಮಾರಾಟದ ದಂಧೆಯೂ ಅವ್ಯಾಹತವಾಗಿ ನಡೆಯುತ್ತಿದೆ' ಎಂದರು.
ಪೊಲೀಸರು ಹಾಗೂ ಜಿಲ್ಲಾಡಳಿತ 32 ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಿ ಗೋಸಾಗಾಟ ದಂಧೆಗೆ ಕಡಿವಾಣ ಹಾಕಲು ಪ್ರಯತ್ನಪಟ್ಟರೆ ಗೋಸಾಗಾಟ ದಂಧೆ ಮಾಡುವವರು ಹಾಲಿನ ವಾಹನ, ಮೀನು ಸಾಗಾಟದ ವಾಹನಗಳಲ್ಲಿ ಗೋಮಾಂಸ ಸಾಗಾಟ ಮಾಡುವ ಉಪಾಯ ಮಾಡಿದ್ದಾರೆ. ಇದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ್ದಾರೆ.
ಆದರೆ ಅಕ್ರಮ ಗೋಮಾಂಸ ಸಾಗಾಟಗಾರರು ಇಂದು ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಕೋರ್ಟ್‌ಗೆ ದಾಖಲುಪಡಿಸಿ ಆ ಮಾಂಸವನ್ನು ಮಂಗಳೂರಿನ ಮಾಂಸದಂಗಡಿಯಲ್ಲಿ ಮಾರಾಟ ಮಾಡಿದ್ದಾರೆ. 48 ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ಶೈಥಿಲೀಕರಣ ವ್ಯವಸ್ಥೆಯಲ್ಲಿ ಇರಿಸದ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಮ.ನಾ.ಪ ಆಯುಕ್ತರು ತಕ್ಷಣ ಈ ಮಾಂಸ ಮಾರಾಟ ಮಾಡುವ ಅಂಗಡಿಗಳಿಗೆ ದಾಳಿ ನಡೆಸಿ ಅದನ್ನು ಪತ್ತೆ ಹಚ್ಚಿ ತಕ್ಷಣ ಆ ಅಂಗಡಿಗಳ ಪರವಾನಿಗೆ ರದ್ದು ಮಾಡಬೇಕು. ಮಾತ್ರವಲ್ಲದೆ ಮಾಂಸವನ್ನು ಲ್ಯಾಬ್ ಗೆ ಕಳಿಸಿ ಅದನ್ನು ಪರಿಶೀಲನೆ ನಡೆಸಿ ಮಾರಾಟಗಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.
ಕುದ್ರೋಳಿಯಲ್ಲಿ ನಡೆಯುತ್ತಿರುವ ಅಧಿಕೃತ ಕಸಾಯಿಖಾನೆಯಲ್ಲಿ ಯಾಸಿನ್ ಕುದ್ರೋಳಿ ಎಂಬ ಗೋಕಳ್ಳ ಆಡು, ಕುರಿ ಮಾತ್ರ ಕಡಿಯುತ್ತೇನೆ ಎಂದು ಹೇಳುತ್ತಾನೆ. ಆದರೆ ಅಲ್ಲಿಯೇ ಪಕ್ಕದಲ್ಲಿ ಅನಧಿಕೃತ ಕಸಾಯಿಖಾನೆ ಇದ್ದು, ಅಲ್ಲಿ ಗೋವುಗಳನ್ನು ಕದ್ದು ತಂದು ಅಕ್ರಮವಾಗಿ ಹತ್ಯೆ ಮಾಡಿ ಮ.ನ.ಪಾ ವ್ಯಾಪ್ತಿಯ ಎಲ್ಲಾ ಮಾಂಸದಂಗಡಿಗಳಿಗೆ ಸಾಗಾಟ ಮಾಡಲಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಯಾಸಿನ್ ಕುದ್ರೋಳಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅನಧಿಕೃತ ಕಸಾಯಿಖಾನೆಯ ಮೇಲೆ ದಾಳಿ ನಡೆಸಿ ಮುಚ್ಚಬೇಕು. ತಾವೇನಾದರೂ ಈ ಕಾರ್ಯ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಜರಂಗದಳದ ಕಾರ್ಯಕರ್ತರೇ ದಾಳಿ ನಡೆಸುತ್ತಾರೆ ಎಂದು ಶರಣ್ ಪಂಪ್ ವೆಲ್ ಎಚ್ಚರಿಕೆ ನೀಡಿದರು.
ಈ ಸಂದರ್ಭ ಅಕ್ರಮ ಕಸಾಯಿಖಾನೆಯಿಂದ ತಂದ ಗೋಮಾಂಸವನ್ನು ಪಾಲಿಕೆಯ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಿಗೆ ರದ್ದು ಮಾಡುವಂತೆ ಹಾಗೂ ಅಕ್ರಮ ಕಸಾಯಿಖಾನೆ ನಿರ್ಮಾಣ ಮಾಡಿರುವ ಯೂಸುಫ್ ಕುದ್ರೋಳಿಯನ್ನು ತಕ್ಷಣ ಬಂಧಿಸುವಂತೆ ಮಂಗಳೂರು ಮ.ನ.ಪಾ ಆಯುಕ್ತ ಅಕ್ಷಯ್ ಶ್ರೀಧರ್ ಅವರಿಗೆ ಪ್ರತಿಭಟನಾಕಾರರು ಮನವಿ ಮಾಡಿದರು.