ಬೆಂಗಳೂರು:ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿ ನಿಮಗೆ ಆಯುರಾರೋಗ್ಯವನ್ನಿತ್ತು, ಸಕಲ ಸನ್ಮಂಗಲವನ್ನುಂಟು ಮಾಡಲಿ. ನಿಮ್ಮ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸುವಂತೆ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆಯವರು ಪತ್ರ ಬರೆದಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಕಂಡು ತಕ್ಷಣ ನಿಮ್ಮ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ, ಕರ್ನಾಟಕ ಜಲವಾಹಿನಿ ಮತ್ತು ಸಣ್ಣ ನೀರಾವರಿ ಯೋಜನೆಯ ಅಧಿಕಾರಿಗಳು ಧರ್ಮಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಗಮನಿಸಿದರು. ನನ್ನೊಂದಿಗೆ ಮಾತನಾಡಿ ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ಧರ್ಮಾಧಿಕಾರಿ ಪತ್ರದಲ್ಲಿ ವಿವರಿಸಿದ್ದಾರೆ.
ನಮ್ಮ ಕೋರಿಕೆಯನ್ನು ಮನ್ನಿಸಿ ಕುಡಿಯುವ ನೀರಿನ ಕೊರತೆಯ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ನೀವು ನೇತ್ರಾವತಿ ನದಿ ಮತ್ತು ನೆರಿಯ ನದಿಗೆ 2 ಕಿಂಡಿ ಅಣೆಕಟ್ಟು ನಿರ್ಮಿಸಲು 7 ಕೋಟಿ ಹಣವನ್ನು ಮಂಜೂರು ಮಾಡಿ ಅಧಿಕಾರಿಗಳಿಗೆ ಆದೇಶ ನೀಡಿರುವುದು ಸಂತೋಷವಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಜನತೆ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಅನೇಕ ಮಂದಿ ಧರ್ಮಸ್ಥಳಕ್ಕೆ ನೀರನ್ನು ತಂದು ಕೊಟ್ಟಿದ್ದಾರೆ. ಇದನ್ನು ಅನ್ನಪೂರ್ಣ ಛತ್ರದಲ್ಲಿ ಅಡುಗೆಗೆ ಹಾಗೂ ಭಕ್ತಾದಿಗಳಿಗೆ ಕುಡಿಯಲು ಬಳಸಲಾಗಿದೆ. ನಿಮ್ಮ ಕಾಳಜಿಗೆ ನಮ್ಮ ಕ್ಷೇತ್ರದ ವತಿಯಿಂದ ಹಾಗೂ ಎಲ್ಲಾ ಭಕ್ತಾದಿಗಳ ಪರವಾಗಿ ಕೃತಜ್ಞತೆಗಳು ಎಂದು ಪತ್ರದ ಮುಖೇನ ಡಾ. ವಿರೇಂದ್ರ ಹೆಗ್ಗಡೆ ಅವರು ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.