ಬೆಳ್ತಂಗಡಿ(ದಕ್ಷಿಣ ಕನ್ನಡ): ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ವೀರ ಕೇಸರಿ ತಂಡದ ಸದಸ್ಯರು ತಾಲೂಕಿನ ಪಟ್ರಮೆ ಗ್ರಾಮದ ಅನಾರು ಎಂಬಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅನಾರು ಸಮೀಪ ಗಿರಿಜಾ ಎಂಬವರು ತನ್ನ ಎರಡು ಮಕ್ಕಳೊಂದಿಗೆ ಮನೆ ಇಲ್ಲದೆ ಒಂದು ಸಣ್ಣ ಗುಡಿಸಲಲ್ಲಿ ವಾಸವಾಗಿದ್ದರು. ಇದನ್ನು ಮನಗಂಡ ಸ್ಥಳೀಯ ವೀರ ಕೇಸರಿ ತಂಡದ ಯುವಕರು ಗ್ರಾಮದ ಪ್ರಮುಖರೊಂದಿಗೆ ಸಮಾಲೋಚಿಸಿ ಬಡ ಕುಟುಂಬಕ್ಕೆ ಒಂದು ಮನೆ ಕಟ್ಟಿ ಕೊಡಬೇಕೆಂದು ಪಣ ತೊಟ್ಟರು. ಅದೇ ರೀತಿ ಬೆಳ್ತಂಗಡಿ ತಾಲೂಕಿನ ಸ್ಪಂದನ ಸೇವಾ ಸಂಘ, ಊರಿನ ದಾನಿಗಳ ಸಹಕಾರದಿಂದ, ವೀರ ಕೇಸರಿ ಹಾಗೂ ಬಿಜೆಪಿಯ ಕೆಲ ಮುಖಂಡರು ಸೇರಿ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಬೆಳ್ತಂಗಡಿ ವೀರ ಕೇಸರಿ ತಂಡ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನೆಯ ಕೀ ಹಸ್ತಾಂತರಿಸಿ ಮಾತನಾಡಿದರು. ವಿವಿಧ ದಾನಿಗಳ ಸಹಕಾರದಲ್ಲಿ ವೀರ ಕೇಸರಿ ತಂಡದ ಯುವಕರು ಬಡ ಕುಟುಂಬಕ್ಕೊಂದು ಮನೆ ಕಟ್ಟಿ ಕೊಡುವ ಮೂಲಕ ಎಲ್ಲರೂ ಮೆಚ್ಚುವಂತಹ ಕಾರ್ಯವನ್ನು ಮಾಡಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಇವರ ಇಂತಹ ಸಮಾಜ ಸೇವೆಗೆ ದೇವರ ಆಶೀರ್ವಾದ ಸದಾ ಇದೆ. ಇವರ ಸಮಾಜಮುಖಿ ಕೆಲಸಗಳು ಇತರರಿಗೂ ಮಾದರಿಯಾಗಲಿ ಎಂದರು. ಇನ್ನೂ ತಂಡಕ್ಕೆ ತನ್ನ ವಯಕ್ತಿಕ ನೆಲೆಯಲ್ಲಿ 25,000 ರೂಪಾಯಿ ನೀಡುವುದಾಗಿ ಭರವಸೆ ನೀಡಿ, ಮುಂದೆಯೂ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ವೇಳೆ ವೀರಕೇಸರಿ ತಂಡದ ತಿಲಕ್ ಮಾತನಾಡಿ, ಮನೆ ಕಟ್ಟಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಈ ವೇಳೆ ಈ ಸತ್ಕಾರ್ಯದಲ್ಲಿ ಪ್ರಮುಖರಾದ ಉಮೇಶ್. ಮನೋಜ್ ಪಟ್ರಮೆ, ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ್, ಯೋಗೀಶ್ ಅಲಂಬಿಲ, ರುಕ್ಮಯ್ಯ ಪದಲ ಮೊದಲಾದವರು ಉಪಸ್ಥಿತರಿದ್ದರು.