ಮಂಗಳೂರು: ಉಕ್ರೇನ್ನಲ್ಲಿ ಸಿಲುಕಿರುವ ನಗರದ ವೈದ್ಯಕೀಯ ವಿದ್ಯಾರ್ಥಿಗಳ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿದರು. ನಗರದ ಬಿಜೈ ನ್ಯೂರೋಡ್ ನಲ್ಲಿರುವ ಅನುಷಾ ಹಾಗೂ ಸಾಕ್ಷಿ ಸುಧಾಕರ್ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಧೈರ್ಯ ತುಂಬಿದರು.
ಉಕ್ರೇನ್ನಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲು ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ದ.ಕ.ಜಿಲ್ಲೆಯ 18 ಮಂದಿ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ. ಈಗಾಗಲೇ ಈ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯ ನಾಲ್ವರು ಸಚಿವರನ್ನು ನೇಮಿಸಿ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಕೆಲವರು ಈಗಾಗಲೇ ವಿಮಾನ ಹತ್ತಿದ್ದು, ಇನ್ನೂ ಕೆಲವರು ಬಂಕರ್ಗಳಲ್ಲೇ ಇದ್ದಾರೆ. ನಗರದ ಐವರು ವಿದ್ಯಾರ್ಥಿಗಳ ಮನೆಗೂ ಭೇಟಿ ನೀಡಿ ಧೈರ್ಯ ತುಂಬಿದ್ದೇವೆ. ಒಂದು ವಾರದೊಳಗೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಭರವಸೆ ನೀಡಲಾಗುತ್ತದೆ ಎಂದು ಹೇಳಿದರು.
ನವೀನ್ ಎಂಬ ಯುವಕ ದಾಳಿಯಲ್ಲಿ ಮೃತಪಟ್ಟಿರೋದು ಬೇಸರದ ಸಂಗತಿ. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ. ಆದರೆ ಉಳಿದವರು ಭಯ ಪಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ತಮ್ಮ ಜೊತೆಗಿದೆ. ಸಿಎಂ ಬೊಮ್ಮಾಯಿಯವರು ನೋಡಲ್ ಆಫೀಸರ್ಗಳನ್ನು ನೇಮಿಸಿ ಕ್ರಮವಹಿಸಿದ್ದಾರೆ. ನವೀನ್ ಘಟನೆಯ ಬಳಿಕ ಸಂಸದ ಉದಾಸಿಯವರು ದೆಹಲಿಗೆ ಹೋಗಿದ್ದಾರೆ. ನಾನು ತಕ್ಷಣ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ, ಸಚಿವ ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ. ಆ ಭಾಗದ ಎಲ್ಲಾ ಶಾಸಕರು, ಸಂಸದರಿಗೆ ಅವರ ಮನೆಗೆ ಹೋಗಲು ತಿಳಿಸಿದ್ದೇನೆ ಎಂದರು.
ಪಾಸ್ ಪೋರ್ಟ್ ವಿಚಾರದಲ್ಲಿ ಸಮಸ್ಯೆ ಇಲ್ಲ..ಪಾಸ್ ಪೋರ್ಟ್ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲವೆಂದು ಪ್ರಧಾನಿ ತಿಳಿಸಿದ್ದಾರೆ. ಪಾಸ್ ಪೋರ್ಟ್ ಕಳೆದುಕೊಂಡಿರುವ ಘಟನೆ ಬಹಳಷ್ಟು ಆಗಿದೆ. ಕೆಲವು ಏಜೆಂಟ್ಗಳು ಸೃಷ್ಟಿಯಾಗಿ ತಾವು ಭಾರತಕ್ಕೆ ತಲುಪಿಸುವ ಡಿಮ್ಯಾಂಡ್ ಮಾಡ್ತಿದ್ದಾರೆ. ಎಲ್ಲಾ ದೇಶಗಳಲ್ಲಿ ಪ್ರಧಾನಿ ಮನವಿ ಮೇರೆಗೆ ಪಾಸ್ ಪೋರ್ಟ್ ಇಲ್ಲದೆ ತರುವ ಕೆಲಸವನ್ನು ಎಂಬೆಸಿ ಮಾಡುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಇದನ್ನೂ ಓದಿ:'ನವೀನ್ ಸಾವಿನ ನೆಪದಲ್ಲಿ ಜಾತಿ, ಮೀಸಲಾತಿ ವ್ಯವಸ್ಥೆ ಬಗ್ಗೆ ಮಾತನಾಡುವುದು ಅನುಚಿತ'