ಮಂಗಳೂರು:ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೊದಲ ಬಾರಿಗೆ ಮಂಗಳೂರಿನಿಂದ ಗೋವಾಗೆ ಇಂದು ಸಂಚಾರ ಆರಂಭಿಸಿದೆ. ಮಂಗಳೂರು ಮಡಗಾಂವ್ ನಡುವೆ ಸಂಚರಿಸುವ ವಂದೇ ಭಾರತ ರೈಲು ಸೇರಿದಂತೆ ಆರು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆಯೋಧ್ಯೆಯಲ್ಲಿ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಈ ರೈಲು ಸೇವೆ ಆರಂಭವಾಗಿದೆ.
ಮಂಗಳೂರು ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಾಟಕ್ಕೆ ದಕ್ಷಿಣ ರೈಲ್ವೆ ವ್ಯವಸ್ಥೆ ಮಾಡಿದೆ. ವಂದೇ ಭಾರತ್ ರೈಲಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಅನೇಕ ಮುಖಂಡರು ಇಂದು ಸಂಚರಿಸುವುದರೊಂದಿಗೆ ಸಂತಸ ವ್ಯಕ್ತಪಡಿಸಿದರು.
ವಂದೇ ಭಾರತ್ ನಿಲುಗಡೆ ವಿವರ: ಮಂಗಳೂರು ಮಡಗಾಂವ್ ಮಧ್ಯೆ 320 ಕಿ. ಮೀ. ದೂರ ಇದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್, ಉಡುಪಿ, ಕಾರವಾರ, ಮಡಗಾಂವ್ನಲ್ಲಿ ನಿಲುಗಡೆಯಾಗಲಿದೆ. 4 ಗಂಟೆ 35 ನಿಮಿಷ ಪ್ರಯಾಣಕ್ಕೆ ಸೀಮಿತವಾಗಿರುವ ಈ ರೈಲಿನಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮಾತ್ರ ಇದೆ. ಸ್ಲೀಪರ್ ಕೋಚ್ ಇರುವುದಿಲ್ಲ.
ಮಂಗಳೂರು ಮಡಗಾಂವ್ ರೈಲು ಮಂಗಳೂರು ಸೆಂಟ್ರಲ್ನಿಂದ ಬೆಳಗ್ಗೆ 8.30 ಕ್ಕೆ ಹೊರಟು, ಉಡುಪಿಗೆ 9.48, ಕಾರವಾರಕ್ಕೆ 12.08 ಮತ್ತು ಮಧ್ಯಾಹ್ನ 1.05 ಕ್ಕೆ ಮಡಗಾಂವ್ ತಲುಪಲಿದೆ. ಸಂಜೆ 6.10 ಕ್ಕೆ ಮಡಗಾಂವ್ನಿಂದ ಹೊರಟು ಕಾರವಾರಕ್ಕೆ 6.55, ಉಡುಪಿಗೆ ರಾತ್ರಿ 9.12 ಮತ್ತು ರಾತ್ರಿ 10.45 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿ :ಈ ಕುರಿತುಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಂಗಳೂರಿನ ಜನತೆಗೆ ಇಂದು ಐತಿಹಾಸಿಕ ದಿನ. ಶ್ರೀರಾಮ ಚಂದ್ರನ ಜನ್ಮಭೂಮಿಯಲ್ಲಿ ಮಂಗಳೂರಿನಿಂದ ಮಡಗಾಂವ್ಗೆ ಹೋಗುವ ವಂದೇ ಭಾರತ ರೈಲಿಗೆ ಪ್ರಧಾನಮಂತ್ರಿ ಚಾಲನೆ ನೀಡಿದ್ದಾರೆ. ದಕ್ಷಿಣ ಕನ್ನಡ ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಉದ್ಯಮಶೀಲತೆಗೆ ಹೆಸರಾದ ಜಿಲ್ಲೆ, ಗೋವಾ ಕೂಡ ಅತ್ಯುತ್ತಮ ಪ್ರಾಕೃತಿಕ ಪ್ರವಾಸೋದ್ಯಮ ಕೇಂದ್ರವಾಗಿದೆ. ಎರಡು ಪ್ರವಾಸ ಕೇಂದ್ರಗಳ ಮಧ್ಯೆ ಈ ರೈಲು ಓಡಾಟ ನಡೆಸುತ್ತದೆ ಎಂದು ತಿಳಿಸಿದರು.
ಮಂಗಳೂರು ಜನರು ಹೆಚ್ಚು ಮುಂಬೈನಲ್ಲಿದ್ದಾರೆ. ಮುಂಬೈನಿಂದ ಗೋವಾ ಮತ್ತು ಮಂಗಳೂರಿನಿಂದ ಗೋವಾ ಹೋಗುವ ರೈಲು ಕನೆಕ್ಟ್ ಆಗುತ್ತದೆ. ಇದರಿಂದ 10 ಗಂಟೆಯಲ್ಲಿ ಮುಂಬೈ ತಲುಪಲು ಸಾಧ್ಯವಾಗುತ್ತದೆ. ಗೋವಾದಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಗೋವಾ ಹೋಗುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಪ್ರಯಾಣಿಕರು ಏನಂತಾರೆ;ಪ್ರಯಾಣಿಕ ಬಾಲಕೃಷ್ಣ ಎಂಬುವರು ಮಾತನಾಡಿ, ಇದು ಹೊಸ ಅನುಭವ, ಜಪಾನ್ನಲ್ಲಿ ಬುಲೆಟ್ ಟ್ರೈನ್ ನಲ್ಲಿ ಸಂಚಾರ ಮಾಡಿದ್ದೆ. ಅದು ಗಂಟೆಗೆ 300 ಕಿ.ಮೀ ವೇಗದಲ್ಲಿ ಸಂಚರಿಸಿತ್ತು. ಆ ವೇಗಕ್ಕೆ ಹೋಲಿಸಿದರೆ ಇದು ಅರ್ಧ ವೇಗ. ಆದರೆ ಆ ವೇಗವನ್ನು ಪಡೆಯುವ ಸ್ಥಿತಿಯಲ್ಲಿ ಭಾರತ ದಾಪುಗಾಲಿಡುತ್ತಿದೆ ಎನ್ನುವುದು ಖುಷಿ ವಿಚಾರ ಎಂದರು.
ಇನ್ನೊಬ್ಬ ಪ್ರಯಾಣಿಕರಾದ ದಿವ್ಯಾ ಮಾತನಾಡಿ, ಪ್ರಯಾಣ ತುಂಬಾ ಚೆನ್ನಾಗಿ ಅನಿಸುತ್ತಿದೆ. ಪ್ರಧಾನಮಂತ್ರಿ ಉದ್ಘಾಟನೆ ಮಾಡಿದ ಬೆನ್ನಲ್ಲೇ ನಾವು ಪ್ರಯಾಣದಲ್ಲಿ ತೊಡಗಿಸಿಕೊಂಡಿದ್ದೇವೆ. ತುಂಬಾ ಖುಷಿಯಾಗಿದ್ದೇವೆ. ವಂದೇ ಭಾರತ್ನಲ್ಲಿ ಮುಂದೆಯೂ ಪ್ರಯಾಣ ಮಾಡಬೇಕೆಂದು ಅನಿಸುತ್ತಿದೆ ಎಂದು ಅಭಿಪ್ರಾಯ ತಿಳಿಸಿದರು.
ಟಿಕೆಟ್ ದುಬಾರಿ ದರ:ಮಂಗಳೂರು ಸೆಂಟ್ರಲ್ ಮತ್ತು ಮಡ್ ಗಾಂವ್ ನಡುವೆ ಓಡಾಟ ನಡೆಸುವ ವಂದೇ ಭಾರತ್ ಟಿಕೆಟ್ ದರ ದುಬಾರಿಯಾಗಿದೆ. ಸಿಸಿ ವಿಭಾಗದಲ್ಲಿ ಟಿಕೆಟ್ ದರ ರೂ. 1330 ಇದ್ದರೆ, ಎಸಿ ವಿಭಾಗದಲ್ಲಿ ರೂ. 2350 ಇದೆ. ಇದೇ ರೂಟ್ನಲ್ಲಿ ಇತರ ರೈಲಿನ ದರ ಸ್ಲೀಪರ್ ಕ್ಲಾಸ್ಗೆ ರೂ. 295 ಮಾತ್ರ ಇದೆ. ಇದಕ್ಕೆ ಹೋಲಿಸಿದರೆ ವಂದೇ ಭಾರತ್ ರೈಲಿನ ಟಿಕೆಟ್ ದರ ನಾಲ್ಕು ಪಟ್ಟು ಹೆಚ್ಚು ಇದೆ.
ವೇಗದಲ್ಲಿ ವ್ಯತ್ಯಾಸ ಇಲ್ಲ, ವಂದೇ ಭಾರತ್ ರೈಲಿನಲ್ಲಿ ಮಂಗಳೂರು ಮಡಗಾಂವ್ ಮಧ್ಯೆ ಹೆಚ್ಚಿನ ವ್ಯತ್ಯಾಸ ಇಲ್ಲ. ಮಂಗಳೂರು ಮಡಗಾಂವ್ ಮಧ್ಯೆ ವಂದೇ ಭಾರತ್ ರೈಲಿನ ಸಮಯ 4 ಗಂಟೆ 35 ನಿಮಿಷ. ಇದೇ ರೂಟ್ ನಲ್ಲಿ ಸಂಚರಿಸುವ ಇತರ ರೈಲಿನ ಸಮಯ 5 ಗಂಟೆಯ ಆಸುಪಾಸಿನಲ್ಲಿದೆ. ಉದಾಹರಣೆಗೆ ಮಂಗಳೂರಿನಿಂದ ಹೊರಡುವ ಸಂಪರ್ಕ ಕ್ರಾಂತಿ ( 12217) ರೈಲು ರಾತ್ರಿ 8.10 ಹೊರಟರೆ 1.05 ಕ್ಕೆ ಮಡಗಾಂವ್ ತಲುಪಲಿದೆ. ( ಅವಧಿ 4.55 ಗಂಟೆ)
ಇದನ್ನೂಓದಿ:ಅಯೋಧ್ಯೆ ರೈಲು, ವಿಮಾನ ನಿಲ್ದಾಣ ಉದ್ಘಾಟಿಸಿ, ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ