ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಬಂದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು: ಮಂಗಳೂರು - ಮಡಗಾಂವ್ ನಡುವೆ ಪ್ರಾಯೋಗಿಕ ಸಂಚಾರ

Vande Bharat Express train: ಮಂಗಳೂರಿಗೆ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಬಂದಿದೆ. ಈ ರೈಲು ಮಂಗಳೂರು - ಮಡಗಾಂವ್ ನಡುವೆ ಪ್ರಾಯೋಗಿಕವಾಗಿ ಸಂಚಾರ ಆರಂಭಿಸಿದೆ.

Vande Bharat Express train
ಮಂಗಳೂರಿಗೆ ಬಂದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು: ಮಂಗಳೂರು- ಮಡಗಾಂವ್ ನಡುವೆ ಪ್ರಾಯೋಗಿಕ ಸಂಚಾರ ಆರಂಭ

By ETV Bharat Karnataka Team

Published : Dec 26, 2023, 12:17 PM IST

Updated : Dec 26, 2023, 1:18 PM IST

ಮಂಗಳೂರಿಗೆ ಬಂದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು: ಮಂಗಳೂರು - ಮಡಗಾಂವ್ ನಡುವೆ ಪ್ರಾಯೋಗಿಕ ಸಂಚಾರ

ಮಂಗಳೂರು:ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮಂಗಳೂರಿನಲ್ಲಿ ಓಡಾಟ ನಡೆಸಲು ಸಜ್ಜಾಗಿದೆ. ಮಂಗಳೂರು ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಓಡಾಟಕ್ಕೆ ದಕ್ಷಿಣ ರೈಲ್ವೆ ವಲಯವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದು (ಮಂಗಳವಾರ) ಬೆಳಗ್ಗೆ ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲಾಯಿತು.

ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ರೈಲು‌ ನಿಲ್ದಾಣದಿಂದ‌ ಈ ಪ್ರಾಯೋಗಿಕ ರೈಲು ಪ್ರಯಾಣ ಆರಂಭಿಸಿದ್ದು, ಮಧ್ಯಾಹ್ನ 1.45ಕ್ಕೆ ಮಡಗಾಂವ್ ತಲುಪಲಿದೆ. ಇಂದು ಪ್ರಾಯೋಗಿಕವಾಗಿ ಸಂಚಾರ ನಡೆಸುವುದಕ್ಕೂ ಮುನ್ನವೇ ಸಂಸದ ನಳಿನ್ ಕುಮಾರ್ ಕಟೀಲ್ ಈ ರೈಲನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಡಿ.30 ರಂದು ಮಂಗಳೂರು‌ ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಮಂಗಳೂರು ಸೆಂಟ್ರಲ್​​ನಲ್ಲಿ ಪ್ಲಾಟ್ ಫಾರ್ಮ್ ನಂಬರ್​ 1 ರಲ್ಲಿ ಹೊಸ ರೈಲು ಓಡಾಟ ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

320 ಕಿಮೀ ದೂರದ ಮಂಗಳೂರು ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮಂಗಳೂರು ಸೆಂಟ್ರಲ್, ಉಡುಪಿ, ಕಾರವಾರ, ಮಡಗಾಂವ್​ನಲ್ಲಿ ನಿಲುಗಡೆಯಾಗಲಿದೆ. 4 ಗಂಟೆ ಪ್ರಯಾಣಕ್ಕೆ‌ ಸೀಮಿತವಾಗಿರುವ ಈ ರೈಲಿನಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಇದೆ. ಆದರೆ, ಸ್ಲೀಪರ್ ಕೋಚ್ ಇರುವುದಿಲ್ಲ. ಮಂಗಳೂರು ಮಡಗಾಂವ್ ರೈಲು ಮಂಗಳೂರು ಸೆಂಟ್ರಲ್​ನಿಂದ ಬೆಳಗ್ಗೆ 8.30ಕ್ಕೆ ಹೊರಟು, ಮಧ್ಯಾಹ್ನ 1.05 ಕ್ಕೆ ಮಡಗಾಂವ್ ತಲುಪಲಿದೆ. ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ಇರಲಿದೆ. ಸಂಜೆ 6.10ಕ್ಕೆ ಮಡಗಾಂವ್​ನಿಂದ ಹೊರಟು ರಾತ್ರಿ‌ 10.45ಕ್ಕೆ ಮಂಗಳೂರು‌ ಸೆಂಟ್ರಲ್ ತಲುಪಲಿದೆ.

ಇತ್ತೀಚೆಗೆ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದ ಸಿಎಂ:ಬೆಂಗಳೂರು - ಹುಬ್ಬಳ್ಳಿ- ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್​ ಅವರಿಗೆ ಪತ್ರ ಬರೆದಿದ್ದರು. ಕಿತ್ತೂರು ಕರ್ನಾಟಕ ಬೆಳಗಾವಿ ಭಾಗದ ಲಕ್ಷಾಂತರ ಕನ್ನಡಿಗರ ಪರವಾಗಿ ನಾನು ನಿಮಗೆ ಪತ್ರ ಬರೆದಿದ್ದೇನೆ. ಕೇಂದ್ರ ಸರ್ಕಾರ ಜೂನ್ 17, 2023ಕ್ಕೆ ರಾಜ್ಯದಲ್ಲಿ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಬೆಂಗಳೂರು - ಹುಬ್ಬಳ್ಳಿ- ಧಾರವಾಡವರೆಗೆ ಪ್ರಾರಂಭಿಸಿತ್ತು. ಇದರಿಂದ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಪತ್ರದಲ್ಲಿ ಸಿಎಂ ಈ ಹಿಂದೆ ತಿಳಿಸಿದ್ದರು.

ಬೆಳಗಾವಿ ಅನೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ ಕಾರ್ಖಾನೆ, ಆಟೋ ಮೊಬೈಲ್ ಉದ್ದಿಮೆಗೆ ಆಶ್ರಯ ತಾಣವಾಗಿದೆ. ಆರ್ಥಿಕವಾಗಿ ಪ್ರಮುಖ ಜಿಲ್ಲೆಯಾಗಿದೆ. ಇದರಿಂದ ಬೆಂಗಳೂರು - ಹುಬ್ಬಳ್ಳಿ- ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿ ನಗರವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ:ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನಲ್ಲಿ ಸೈಯದ್ ಕಿರ್ಮಾನಿ, ಜಾಂಟಿ ರೋಡ್ಸ್​ ಪಯಣ: ವಿಡಿಯೋ

Last Updated : Dec 26, 2023, 1:18 PM IST

ABOUT THE AUTHOR

...view details