ಮಂಗಳೂರು: ಕೊರೊನಾ ಕಾರಣದಿಂದ ಶಿಕ್ಷಣ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ. ಕಳೆದ ವರ್ಷವು ಶೈಕ್ಷಣಿಕ ವ್ಯವಸ್ಥೆ ಮೇಲೆ ಉಂಟಾದ ದುಷ್ಪರಿಣಾಮದಿಂದ ಸರಿಯಾದ ಕಲಿಕೆ ಸಾಧ್ಯವಾಗಿಲ್ಲ. ಈ ಬಾರಿ ಏನಾಗಲಿದೆ ಎಂಬ ಚಿಂತೆ ನಡುವೆ ಸರ್ಕಾರ ಕಾಲೇಜು ಆರಂಭಕ್ಕೆ ಸಿದ್ಧತೆಗಳಲ್ಲಿ ತೊಡಗಿದೆ. ಕಾಲೇಜು ಪ್ರಾರಂಭವಾಗುವ ವೇಳೆ ವಿದ್ಯಾರ್ಥಿಗಳು ಲಸಿಕೆ ಪಡೆಯಬೇಕು ಎಂಬ ಉದ್ದೇಶದಿಂದ ನಗರದಲ್ಲಿಂದು 14 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಯಿತು.
ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಆರಂಭ ಸಾಧಾರಣವಾಗಿ ಜೂನ್ ನಲ್ಲಿ ಆರಂಭವಾಗಬೇಕಿದ್ದ ಕಾಲೇಜುಗಳು ಕೊರೊನಾ ಕಾರಣದಿಂದ ಈವರೆಗೆ ಬಾಗಿಲು ತೆರೆದಿಲ್ಲ. ಕೋವಿಡ್ ಪ್ರಕರಣ ಇಳಿಮುಖವಾಗುತ್ತಿರುವುದರಿಂದ ಮತ್ತು ಅನ್ ಲಾಕ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸರ್ಕಾರ ಕಾಲೇಜುಗಳನ್ನು ಪುನಾರಂಭಿಸಲು ದಿನಾಂಕವನ್ನು ನಿಗದಿಪಡಿಸಬಹುದು. ಕಾಲೇಜು ಆರಂಭವಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡರೆ ಅಪಾಯವನ್ನು ತಗ್ಗಿಸಬಹುದು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಇಂದು ಮಂಗಳೂರಿನಲ್ಲಿ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 61 ಪದವಿ, 43 ಡಿಪ್ಲೋಮಾ ಎಂಜಿನಿಯರಿಂಗ್, 32 ನರ್ಸಿಂಗ್, 8 ಮೆಡಿಕಲ್ ಕಾಲೇಜುಗಳ 1,52,310 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಇಂದು ದ.ಕ ಜಿಲ್ಲೆಯಲ್ಲಿ 14,410 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ರಥ ಬೀದಿಯಲ್ಲಿರುವ ಡಾ.ದಯಾನಂದ ಪೈ, ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಯಿತು.
ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ಬಳಿಕ ಶಾಲಾ-ಕಾಲೇಜಿಗೆ ಪ್ರವೇಶ ಎಂಬ ಹೇಳಿಕೆಗಳನ್ನು ಸಚಿವರು ನೀಡಿದ್ದಾರೆ. ಕಾಲೇಜು ಆರಂಭವಾದರೂ ಲಸಿಕೆ ಸಿಗದೆ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ತೊಡಕಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಬೃಹತ್ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಒಟ್ಟು 14,410 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಯೋಜನೆ ಹಾಕಲಾಗಿದೆ. ಇದರಿಂದಾಗಿ ಹಲವು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು. ಒಟ್ಟಿನಲ್ಲಿ ಕಾಲೇಜು ಆರಂಭಕ್ಕೆ ಮುನ್ನವೇ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರು.