ಮಂಗಳೂರು:ನಗರದಲ್ಲಿ ಕೋವಿಡ್ ಹಿನ್ನೆಲೆ ಪೊಲೀಸರಿಗೆ ಊಟಕ್ಕೆ ಕೊರತೆಯಾಗಬಾರದೆಂಬ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ತಾತ್ಕಾಲಿಕ ಪೊಲೀಸ್ ಕ್ಯಾಂಟೀನ್ ಆರಂಭಿಸಿದ್ದರು. ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ. ಇವರಿಗೆ ತಮ್ಮೂರಿನ ಅಡುಗೆ ಕರಾವಳಿಯಲ್ಲಿ ಸಿಗುವುದಿಲ್ಲ. ಹೀಗಾಗಿ ಸಿಬ್ಬಂದಿಯ ಈ ಬೇಸರವನ್ನು ಹೋಗಲಾಡಿಸಲು ಕಮಿಷನರ್ ಪೊಲೀಸ್ ಕ್ಯಾಂಟೀನ್ನಲ್ಲಿ ರೊಟ್ಟಿ ವ್ಯವಸ್ಥೆ ಮಾಡಿದ್ದಾರೆ. ಪೊಲೀಸರಿಗೀಗ ಉತ್ತರ ಕರ್ನಾಟಕ ಭಾಗದ ಊಟದ ರುಚಿ ಸವಿಯುವ ಭಾಗ್ಯ ಸಿಕ್ಕಿದೆ.
ಮಂಗಳೂರು ಪೊಲೀಸ್ ಕ್ಯಾಂಟೀನ್ನಲ್ಲಿ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ..! - ಮಂಗಳೂರು ಪೊಲೀಸ್ ಕ್ಯಾಂಟೀನ್ನಲ್ಲಿ ರೊಟ್ಟಿ
ಮಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಕರ್ನಾಟಕದ ಪೊಲೀಸರಿಗೆಂದು ಪೊಲೀಸ್ ಕ್ಯಾಂಟೀನ್ನಲ್ಲಿ ರೊಟ್ಟಿ ಊಟ ತಯಾರಿಸಲಾಗಿತ್ತು. ಮಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕುಟುಂಬದ ಮಹಿಳೆಯರು ಉತ್ತರ ಕರ್ನಾಟಕದ ಊಟ ನೀಡಲು ಕೈ ಜೋಡಿಸಿದ್ದು, ಹಲವು ಮಂದಿ ರೊಟ್ಟಿಯನ್ನು ಮನೆಯಲ್ಲಿ ತಯಾರು ಮಾಡಿ ಕಳುಹಿಸಿಕೊಟ್ಟರೆ ಇನ್ನೂ ಕೆಲವು ಮಹಿಳೆಯರು ಪೊಲೀಸ್ ಕ್ಯಾಂಟೀನ್ ಬಳಿಯೇ ರೊಟ್ಟಿ ತಟ್ಟಿ ಬೇಯಿಸಿದ್ರು.
ಪೊಲೀಸರ ಊಟದ ವ್ಯವಸ್ಥೆಗೆಂದೇ ಆರಂಭಿಸಲಾದ ಪೊಲೀಸ್ ಕ್ಯಾಂಟೀನ್ನಲ್ಲಿ ಪ್ರತಿನಿತ್ಯ 300 ಕ್ಕೂ ಹೆಚ್ಚು ಪೊಲೀಸರು ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುತ್ತಿದ್ದಾರೆ. ಆದರೆ ಇಲ್ಲಿ ದೊರೆಯುವ ಊಟ ಕರಾವಳಿ ಭಾಗದಲ್ಲಿ ಸಿಗುವ ಆಹಾರ. ಹೀಗಾಗಿ ಉತ್ತರ ಕರ್ನಾಟಕ ಮಂದಿಗೆ ತಮ್ಮೂರಿನ ಊಟ ಸೇವಿಸಬೇಕೆಂಬ ಆಸೆ ಸಹಜವಾಗಿಯೇ ಇತ್ತು. ಈ ಆಸೆಯನ್ನು ಮಂಗಳೂರು ನಗರ ಪೊಲೀಸ್ ಕಮೀಷನರ್ ಈಡೇರಿಸಿದ್ದಾರೆ. ಮಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕುಟುಂಬದ ಮಹಿಳೆಯರು ಉತ್ತರ ಕರ್ನಾಟಕದ ಊಟ ನೀಡಲು ಕೈ ಜೋಡಿಸಿದ್ದು, ಹಲವು ಮಂದಿ ರೊಟ್ಟಿಯನ್ನು ಮನೆಯಲ್ಲಿ ತಯಾರು ಮಾಡಿ ಕಳುಹಿಸಿಕೊಟ್ಟರೆ ಇನ್ನೂ ಕೆಲವು ಮಹಿಳೆಯರು ಪೊಲೀಸ್ ಕ್ಯಾಂಟೀನ್ ಬಳಿಯೇ ರೊಟ್ಟಿ ತಟ್ಟಿ ಬೇಯಿಸಿದ್ರು.
ಮಂಗಳೂರು ಪೊಲೀಸರಿಗೆ ತಯಾರು ಮಾಡಿದ ಉತ್ತರ ಕರ್ನಾಟಕದ ಅಡುಗೆಯಲ್ಲಿ ಖಡಕ್ ರೊಟ್ಟಿ, ಸಾದಾ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಮೆಂತಿ ಸೊಪ್ಪು, ಕ್ಯಾರೆಟ್, ಮೂಲಂಗಿ ತುಂಡು, ಬದನೆ ಗೊಜ್ಜು, ಹೆಸರು ಕಾಳು ಗಸಿ ಇತ್ತು. ಉತ್ತರ ಕರ್ನಾಟಕದ ಪೊಲೀಸರಂತು ಇದನ್ನು ತಿಂದು ಹಬ್ಬದೂಟ ಎಂದು ಖುಷಿ ಪಟ್ರು. ಸ್ವತ: ಪೊಲೀಸ್ ಕಮಿಷನರ್ ಶಶಿಕುಮಾರ್ ಸಹ ಅಧಿಕಾರಿಗಳೊಂದಿಗೆ ರೊಟ್ಟಿಯೂಟ ಸವಿದರು. ಕರಾವಳಿಯ ಅಡುಗೆಯನ್ನು ತಿಂದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಇದೀಗ ತಮ್ಮ ಉತ್ತರ ಕರ್ನಾಟಕ ಸ್ಟೈಲ್ ಅಡುಗೆ ಸೇವಿಸಿದ್ರಿಂದ ಹೊಸ ಹುರುಪು ಬಂದಿದೆ.