ಮಂಗಳೂರು: ರಾಜ್ಯ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ಆಯ್ಕೆ ಬಹುತೇಕ ಖಚಿತವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಖಾದರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಒಟ್ಟು 5 ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಚಿವರಾಗಿ, ವಿಪಕ್ಷ ಉಪನಾಯಕರಾಗಿಯೂ ಸೇವೆ ಸಲ್ಲಿಸಿರುವ ಇವರಿಗೆ ಇದೀಗ ವಿಧಾನಸಭಾ ಸ್ಪೀಕರ್ ಹುದ್ದೆ ಲಭಿಸುತ್ತಿದೆ.
ವಿದ್ಯಾರ್ಹತೆ: ಯು.ಟಿ.ಅಬ್ದುಲ್ ಖಾದರ್ ಅಲಿ ಫರೀದ್ ಅವರು ಬಿಎ, ಎಲ್ಎಲ್ಬಿ ವ್ಯಾಸಂಗ ಮಾಡಿದ್ದಾರೆ. ತಂದೆ ಯು.ಟಿ.ಫರೀದ್ ಅವರು ಕೂಡ ಬಿಎ, ಎಲ್ಎಲ್ಬಿ ವ್ಯಾಸಂಗ ಮಾಡಿದ್ದರು. ಫರೀದ್ ಖಾದರ್ 1972, 1978, 1999, 2004 ರಲ್ಲಿ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಯು.ಟಿ.ಖಾದರ್ ಅವರು 1969 ಅಕ್ಟೋಬರ್ 12 ರಂದು ಮಂಗಳೂರಿನಲ್ಲಿ ಯು.ಟಿ.ಫರೀದ್ ಖಾದರ್, ಯು.ಟಿ.ನಸೀಮಾ ಫರೀದ್ ದಂಪತಿಗೆ ಜನಿಸಿದ್ದರು. ಯು.ಟಿ.ಖಾದರ್ ಅವರು ತನ್ನ ಬಾಲ್ಯದ ಶಿಕ್ಷಣವನ್ನು ರೋಶನಿ ನಿಲಯ, ಒಂದರಿಂದ ನಾಲ್ಕನೇ ತರಗತಿಯನ್ನು ಸೈಂಟ್ ಜೆರೋಝ, ನಾಲ್ಕನೇ ತರಗತಿಯಿಂದ ಪ್ರೌಢ ಶಿಕ್ಷಣವನ್ನು ಸೈಂಟ್ ಅಲೋಶಿಯಸ್ನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಕಲಿತು ನಂತರ ಎಸ್ಡಿಎಮ್ ಕಾಲೇಜಿನಲ್ಲಿ ಬಿಎ, ಎಲ್ಎಲ್ಬಿ ಪದವಿ ಶಿಕ್ಷಣ ಮುಗಿಸಿದರು.
ಹವ್ಯಾಸಗಳು: ರಾಜಕೀಯ ಮಾತ್ರವಲ್ಲದೆ ಬೈಕ್ ಹಾಗೂ ಕಾರ್ ರೇಸ್ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಯು.ಟಿ.ಖಾದರ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮೋಟೋ ರೇಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದರು. ಕ್ರೀಡೆಯಲ್ಲಿ ಕೂಡ ಆಸಕ್ತಿ ಹೊಂದಿದ್ದು ಬಾಲ್ಯದಲ್ಲಿ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಹಾಕಿ, ಟೆನ್ನಿಸ್ ಹಾಗೂ ಇತರ ಕ್ರೀಡೆಗಳನ್ನು ಆಡುತ್ತಿದ್ದರು.
ರಾಜಕೀಯ ಪಯಣ:ಬಾಲ್ಯದಿಂದಲೂರಾಜಕೀಯದಲ್ಲಿ ಒಲವು ಹೊಂದಿದ್ದ ಯು.ಟಿ.ಖಾದರ್, 1990ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 1994 ರಿಂದ 1999ರ ವರೆಗೆ NSUI ಜಿಲ್ಲಾಧ್ಯಕ್ಷರಾಗಿ, 1999 ರಿಂದ 2001ರ ವರೆಗೆ NSUI ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2003 ರಲ್ಲಿ ಘಟಪ್ರಭದಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ, 2004 ರಲ್ಲಿ ಹಿಮಾಚಲ ಪ್ರದೇಶದ ಕಂದಘಾಟ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ 2005ರಲ್ಲಿ ಸೇವಾದಳದ ಹೆಚ್ಚುವರಿ ಮುಖ್ಯ ಸಲಹೆಗಾರರಾಗಿ ಆಯ್ಕೆಯಾಗಿದ್ದರು.