ಮಂಗಳೂರು: ಚುನಾವಣಾ ಭಾಷಣದಲ್ಲಿ ಹನುಮಾನ್ ಚಾಲೀಸ್ ಪಠಣ (ಆಂಜನೇಯ ಮಂತ್ರ) ಮಾಡುವ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರಿಗೆ ಮತ ನೀಡಿದರೆ ಆ ಹನುಮಾನ್ ಚಾಲೀಸ್ ಪುಣ್ಯ ಮತ ನೀಡಿದವರಿಗೆಲ್ಲಾ ಸಿಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಮಿಥುನ್ ರೈಗೆ ಮತ ಹಾಕಿದರೆ ಹನುಮಾನ್ ಚಾಲೀಸ ಪುಣ್ಯ ಸಿಗುತ್ತೆ: ಖಾದರ್ - Lok Sabha constituency
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸಿದ್ದರೆ, ಇತ್ತ ಕಾಂಗ್ರೆಸ್ನಿಂದ ಮೈತ್ರಿ ಅಭ್ಯರ್ಥಿಯಾಗಿ ಮಿಥುನ್ ರೈ ಕಣದಲ್ಲಿದ್ದಾರೆ. ಇವರಿಬ್ಬರ ನಡುವಿನ ಮತಬೇಟೆ ಜೋರಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರು ಬಾಲ್ಯದಿಂದಲೂ ಹನುಮಾನ್ ಚಾಲೀಸ ಕಂಠ ಪಾಠ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ನವರದು ನಿಜವಾದ ಮತ್ತು ಉತ್ತಮ ಹಿಂದುತ್ವ ಎನ್ನುವುದಕ್ಕೆ ಇವರೇ ಸಾಕ್ಷಿ. ಆದರೆ, ಬಿಜೆಪಿ ರಾಜಕೀಯಕ್ಕಾಗಿ ಹಿಂದುತ್ವ ಬಗ್ಗೆ ಮಾತನಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರದಲ್ಲಿ ಹಗರಣಗಳು ಕಂಡುಬಂದ ತಕ್ಷಣವೇ ಆ ಬಗ್ಗೆ ಶಿಸ್ತುಕ್ರಮ ತೆಗೆದುಕೊಂಡ ಉದಾಹರಣೆಗಳಿವೆ. ಆದರೆ, ಬಿಜೆಪಿ ಸರ್ಕಾರದಲ್ಲಿ ರಫೇಲ್ ಹಗರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸಲು ಸುಪ್ರೀಂಕೋರ್ಟಿಗೆ ನೀಡಲಾಗಿದೆ. ಸುಪ್ರೀಂಕೋರ್ಟ್ ಕೂಡ ದಾಖಲೆಗಳನ್ನು ಕೇಳಿದಾಗ ಅದು ಕಳೆದು ಹೋಗಿದೆ ಎನ್ನುತ್ತಾರೆ. ಇದು ಎಂತಹ ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.